ಬೆಂಕಿಯ ಮೇಲಿದೆ ಮೌನದ ಜಲಧಿ

ಬೆಂಕಿಯ ಮೇಲಿದೆ ಮೌನದ ಜಲಧಿ, ಮನಮನದಿ
ಆಂತರ್ಯದ ಉರಿಯಾರದ ನೆಲದಿ, ಭಾರತದಿ || ಪ ||

ಕಂಸ ಜರಾಸಂಧರು ಮೆರೆದಂದು, ಎದುರಾರೆಂದು
ನಕ್ಕಿತು ವಿಧಿ ಮುರಲೀ ಸ್ವರದಿ
ಬೆಳೆಸಿತು ಕಾಲನ ಕಾಲಿಂದಿ, ಗೋಕುಲದಿ || 1 ||

ದುರುಳರು ದಾನವರೆಲ್ಲರ ವಂಶ, ಗೈಯಲು ಧ್ವಂಸ
ಕುರುಕ್ಷೇತ್ರವು ತುಂಬಿತು ಜವದಿ
ಗೀತಾಗಾಂಡೀವದ ರವದಿ, ದ್ವಾಪರದಿ || 2 ||

ಶಕಹೂಣರು ಮೊಗಲಾಂಗ್ಲರ ಧಾಳಿ, ಆಯಿತು ಧೂಳಿ
ಚಿತೆಯಾಯಿತು ಪರರದು ಗಾದಿ
ಕಡೆಗಿಲ್ಲುಳಿಯಿತು ಹಿಡಿಬೂದಿ, ಈ ಯುಗದಿ || 3 ||

ಆಕ್ರಮಕರಿಗೀ ದೇಶದ ಹಾದಿ, ಘೋರಸಮಾಧಿ
ಅಡಗಿರುವಗ್ನಿಯ ಪರ್ವತದಿ
ಅಹಿತರದೆಂತುಳಿವರು ಸುಖದಿ, ಸ್ಫೋಟನದಿ || 4 ||

ಹಿಮಕಿದೆ ಬೆಂಕಿಯ ಎದೆ ಭಾರತದಿ, ಜನ ಜೀವನದಿ
ಬಲಿದಾನದ ಕಥೆ ಕಣಕಣದಿ
ಇತಿಹಾಸದಲಿದೆ ಪುಟಪುಟದಿ, ಯುಗಯುಗದಿ || 5 ||

Leave a Reply

Your email address will not be published. Required fields are marked *