ಬೆಳಗಿನ ಜಾವದಿ ಬಲಗಡೆ ಹೊರಳುತ

ಬೆಳಗಿನ ಜಾವದಿ ಬಲಗಡೆ ಹೊರಳುತ
ಮೇಲಕೆ ಏಳೋ ನನ ಕಂದಾ….
ಕರಗಳನುಜ್ಜಿಕೋ ಕಣ್ಗಳಿಗೊತ್ತಿಕೊ
ದಿನ ಮೊದಲಾಗಲಿ ಮುದದಿಂದ || ಪ ||

ಲಕ್ಷ್ಮೀ ಸರಸ್ವತಿ ಗೌರೀ ಮಾತೆಯು
ಕರತಲದಲ್ಲಿಯೇ ನೆಲಸಿಹರು
ಅನುದಿನ ಮರೆಯದೆ ದರ್ಶನಗೈದರೆ
ಸಂತಸದಿಂದಲೇ ಹರಸುವರು || 1 ||

ಗಿರಿ ಪರ್ವತಗಳು ಮಾತೆಯ ಸ್ತನಗಳು
ಸ್ತನ್ಯವು ಹರಿಯುವ ಜಲಧಾರೆ
ನೆಲವನು ತುಳಿಯುವ ಮೊದಲೇ ಬೇಡಿಕೊ
ಕ್ಷಮೆಯನು ತಾಯಲಿ ಮನಸಾರ || 2 ||

ಶೌಚವ ಮುಗಿಸು ಹಲ್ಲನು ಉಜ್ಜು
ಸ್ನಾನವ ಬೇಗನೆ ನೀ ಮುಗಿಸು
ಹೂಗಳನಾಯ್ದು ದೇವರಿಗೊಪ್ಪಿಸು
ತಂದೆಗು ತಾಯಿಗು ನೀ ನಮಿಸು || 3 ||

ಹೆತ್ತವರೆಂದರೆ ದೇವ ಸಮಾನರು
ಅಕ್ಷರ ಕಲಿಸಿದ ಗುರು ದೇವ
ಪ್ರಕೃತಿಯೂ ದೇವರು ಅತಿಥಿಯು ದೇವರು
ಪ್ರತಿ ಮಾನವನೂ ಮಹದೇವ || 4 ||

ಗಂಗಾ ಗೀತಾ ಗಾಯತ್ರಿಯರು
ಗೋವುಗಳೊಂದಿಗೆ ಗೋವಿಂದ
ಪಂಚಗಕಾರವ ಸ್ಮರಿಸುತಲಿರಲು
ಮಾಧವನೊಲಿವನು ಮುದದಿಂದ || 5 ||

ಕಮಲದ ಕಂಗಳ ಚಲುವೆಯ ನೋಡು
ಕಮಲದ ಒಳಗಡೆ ಕುಳಿತಿಹಳು
ಭಕುತಿಯೊಳಾಕೆಯ ಸ್ತುತಿಸಲು ನೀನು
ಅಕ್ಷರ ವಿದ್ಯೆಯ ನೀಡುವಳು || 6 ||

ಬೆಳಗಿನ ಜಾವದ ನಿರ್ಮಲ ಸಮಯ
ಶ್ರದ್ಧೆಗೆ ಶಾರದೆ ಒಲಿಯುವಳು
ಒಳಗಿನ ಅರಿವಿನ ಕಂಗಳ ತೆರೆಸುತ
ಮನದಂಗಳದಲಿ ನಲಿಯುವಳು || 7 ||

ಅನ್ನವು ಬ್ರಹ್ಮ ರಸವದು ವಿಷ್ಣು
ಹಸಿವನ ದೇವರು ಮಹದೇವ
ಉಣ್ಣುವುದೆಂದರೆ ದೇವರ ಪೂಜೆಯು
ಸ್ವಲ್ಪವು ಚೆಲ್ಲದೆ ಉಣುದೇವ || 8 ||

Leave a Reply

Your email address will not be published. Required fields are marked *

*

code