ಬನ್ನಿರೈ ಭಾರತದ ಬಾಗಿಲಿದೋ ತೆರೆದಿಹುದು

ಬನ್ನಿರೈ ಭಾರತದ ಬಾಗಿಲಿದೋ ತೆರೆದಿಹುದು
ಸನ್ಮತಿಯ ಉನ್ನತಿಯ ಪಥವ ತೋರಿಹುದು || ಪ ||

ಹರನೊಡನೆ ಧುರವಿತ್ತು ಶರವ ಪಡೆದ ನರ
ಮರಣಿಸಿದ ಪ್ರಿಯಪತಿಯ ಮರಳಿ ತಂದವಳ
ಯಮನಾಲಯವ ಹೊಕ್ಕು ವರವಗಳಿಸಿದ ಕುವರ
ವೀರಚರಿತೆಯ ಕೇಳಿ ಯಶವ ಪಡೆದವರ || 1 ||

ರವಿಸೋಮ ವಂಶಗಳ ಕೀರ್ತಿಗಾಥೆಯ ಕಥನ
ವೇದಾಂತ ಉಪನಿಷದ ಗೀತಸಾರದ ಮನನ
ಅಣು ಗಣಕದಧ್ಯಯನ ಕ್ಷಿಪಣಿಗಳ ಉಡ್ಡಯನ
ಪರ ಅಪರವೆರಡರಲೂ ಊರ್ಧ್ವಮುಖಪಯಣ || 2 ||

ಸಂಸ್ಕೃತವು ಸಂಸ್ಕೃತಿಯು ಸಂಸ್ಕಾರ ಸನ್ನಡತೆ
ಸಂಗೀತ ಸಾಹಿತ್ಯ ಸದಭಿರುಚಿ ಬಯಕೆ
ಯೋಗಯಾಗದ ಫಲವು ಶಾಂತಿಯೀವುದು ಮನಕೆ
ಅವಿರತದ ಸಾಧನೆಯು ತಪವು ಬೇಕದಕೆ || 3 ||

ಧರ್ಮಾರ್ಥಿಗಳು ಬನ್ನಿ ಮೋಕ್ಷ ಕಾಮಿಗಳೆನ್ನಿ
ಕರ್ಮಸಿದ್ಧಾಂತವಿದೆ ಶ್ರಮಿಸ ಬನ್ನಿ
ಜನ್ಮ ಜನ್ಮಾಂತರದ ಮಲಿನತೆಯ ತೊಡೆದು
ಸತ್ಕರ್ಮ ಪಥದೊಳಗೆ ಕ್ರಮಿಸ ಬನ್ನಿ || 4 ||

Leave a Reply

Your email address will not be published. Required fields are marked *

*

code