ಬಾಗಿಲನು ತೆರೆದಿರಿಸಿ ಸ್ವಾಗತಕೆ ಕಾದಿಹೆವು

ಬಾಗಿಲನು ತೆರೆದಿರಿಸಿ ಸ್ವಾಗತಕೆ ಕಾದಿಹೆವು
ಸದ್ವಿಚಾರದ ಧಾರೆ ಹರಿದು ಬರಲಿ
ಶುದ್ಧ ಸಾತ್ವಿಕ ಪ್ರೇಮಸುಧೆಯುಂಡ ಹೃದಯಗಳು
ಜತೆಗೂಡಿ ಭಾರತಕೆ ಕೀರ್ತಿ ತರಲಿ || ಪ ||

ಭೂರಮೆಯ ಭವನಕಿದೆ ಆಧ್ಯಾತ್ಮ ತಳಹದಿಯು
ಸಂಗೀತ ನೃತ್ಯಾದಿ ಕಲೆಯ ದ್ವಾರ
‘ಶಾಸ್ತ್ರ’ ಬೆಳಗುವ ದೀಪ್ತಿ ‘ಕ್ಷಾತ್ರ’ ರಕ್ಷಿಪ ಭಿತ್ತಿ
ಸ್ನೇಹ ಬಯಸುವ ಮನಕೆ ತೆರೆದ ದ್ವಾರ || 1 ||

ಶಿಲೆ ಶಿಲೆಯು ಹೊಮ್ಮಿಸುವ ಸಮರಸದ ಸುರನಾದ
ಜನ ಮನವ ಬೆಸೆಯುತಿಹ ನವ್ಯ ವೇದ
ಧ್ಯೇಯ ಪ್ರಣತಿಯ ಪ್ರಭೆಯ ಪ್ರತಿಫಲಿಸುತಿದೆ ಭವನ
ಭಾರತದ ಸುತರೊಳಗೆ ಬರದು ಭೇದ || 2 ||

ನಾನು ಎಂಬುದ ಮರೆತು ನಾವು ಭಾವವು ಮೊಳೆತು
ಸಮಷ್ಟಿಯಲಿ ವ್ಯಷ್ಟಿಯನು ಲೀನಗೊಳಿಸಿ
ರಾಷ್ಟ್ರಹಿತ ಯಜ್ಞದಲಿ ಜೀವನವ ಅರ್ಪಿಸುತ
ವಸುಮತಿಯ ಸೇವೆಯಲಿ ಧನ್ಯರೆನಿಸಿ || 3 ||

Leave a Reply

Your email address will not be published. Required fields are marked *

*

code