ನಾಡಿಗೆ ಸೇವೆಯ ಸಲ್ಲಿಸಲು
ಬಾಡಿದ ಮನಗಳ ಅರಳಿಸಲು
ವೀರ ಪ್ರತಿಜ್ಞೆಯ ತೊಟ್ಟಿಹೆವು….
ಹೊಸನಾಡೊಂದನು ಕಟ್ಟುವೆವು || ಪ ||
ರೂಢಿಯ ಮೌಢ್ಯದ ಗೋಡೆಯ ಕೆಡವಿ
ಗುಡಿಸಲುವಾಸಿಗಳಾ ಮೈದಡವಿ
ಒಲವಿನ ಧಾರೆಯ ಹರಿಸುವೆವು……….
ಅರಿವಿನ ದೀಪವನುರಿಸುವೆವು || 1 ||
ನಮ್ಮ ಪರಂಪರೆಯನು ಸ್ಮರಿಸುತಲಿ
ಘನ ಆದರ್ಶವ ಅನುಸರಿಸುತಲಿ
ಮುಚ್ಚಿದ ಕಂಗಳ ತೆರೆಸುವೆವು……….
ಕೆಚ್ಚೆದೆ ಸಾಹಸ ಮೆರೆಸುವೆವು || 2 ||
ವಿಘ್ನ ವಿರೋಧದ ಭೀತಿಯ ತ್ಯಜಿಸಿ
ಕೀರ್ತಿ ಪ್ರಶಂಸೆಯ ಮೋಹವ ದಹಿಸಿ
ಸ್ವಾರ್ಥ ದುರಾಸೆಯ ಮೆಟ್ಟುವೆವು……
ಗುರಿಯನು ಶೀಘ್ರದಿ ಮುಟ್ಟುವೆವು || 3 ||
ತಾಯ್ನೆಲವೆಮಗೆ ಪರಮಪವಿತ್ರ
ಗ್ರಾಮಗ್ರಾಮವೂ ಕಾರ್ಯಕ್ಷೇತ್ರ
ದಶದಿಶೆಗಳಿಗೂ ಸಾಗುವೆವು……….
ಸೇವೆಯ ಮಹಿಮೆಯ ಸಾರುವೆವು || 4 ||