ಹಿಂದು ಸಾಗರವೆ ದೆಸೆಯ ಬದಲಿಸಿದೆ ಏನಿದೆಂಥ ಮೋಡಿ
ಉಕ್ಕಿ ಮೊರೆಯುತಿವೆ ಕೋಟಿ ಅಲೆಗಳು ತಾಯಿ ಸ್ತುತಿಯ ಪಾಡಿ
ವೀರ ಸಂತತಿಯ ಆವೇಶ ತನುಗಳಲಿ ಪುಡಿ ಪುಡಿಯು ಎಲ್ಲಾ ಬೇಡಿ
ಬಿಂದು ಬಿಂದುವೂ ಇಂದು ಒಂದೆನುವ ಒಮ್ಮತವೆ ಜೀವನಾಡಿ || ಪ ||
ಇರುಳ ಸರಿಸುತಾ ಬಂದ ಬೆಳಗಿಂದು ಒಸಗೆ ತಂದಿಹಳು ಇಳೆಗೆ
ವಿಶ್ವ ಮುಕುಟದ ಸರದಿ ಮೀಸಲು ತಾಯಿ ಭಾರತಿಯ ಶಿರಕೆ
ಜಡತೆ ಝಾಡಿಸಿ ಛಲದಿಂದ ದುಡಿಯುವ ದಿಟ್ಟ ಹೃದಯಗಳ ಹರಕೆ
ದುರುಳರೆದೆಗಳ ಸೀಳಿ ಮಾತೆಗೆ ಜಯಮಾಲೆ ತೊಡಿಸುವಾ ಬಯಕೆ || 1 ||
ದಹಿಸಿ ಅಪಮಾನ ಗಳಿಸಿ ಅಭಿಮಾನ ಕಟ್ಟಿರುವ ಸ್ನೇಹ ಮಹಲು
ಒಡಕು ಇಲ್ಲಿಲ್ಲ ನಿರತ ವಾತ್ಸಲ್ಯ ಅನವರತ ಒಲವ ಹೊನಲು
ರಾಷ್ಟ್ರ ಭಕ್ತಿಯ ಸ್ಪೂರ್ತಿಯಾಗರ ಸಮರಸಕೆ ಉಂಟೆ ಮಿಗಿಲು
ಸಂಘಟಿತ ಶಕ್ತಿ ದಾಸ್ಯಕ್ಕೆ ಮುಕ್ತಿ ಮಾತೆಗಿನ್ನೆಲ್ಲಿ ದಿಗಿಲು || 2 ||