ಭರತ ಮಾತೆಯ ಮಮತೆಯುಡುಗೊರೆ ಯೋಗವೆಂಬ ವಿಸ್ಮಯ
ಅರಿತು ಜಗವು ಅಪ್ಪಿಕೊಂಡಿದೆ ಫಲವು ಅಮಿತವು ಅಕ್ಷಯ
ಇರದು ಇತಿಮಿತಿ ಗುರುಪತಂಜಲಿ ತೋರಿಕೊಟ್ಟರು ಹಾದಿಯ
ನೂರು ಜಂಜಡ ಭರದಿ ಕಳೆಯಲು ಮಾಡಬೇಕಿದೆ ಯೋಗವ || ಪ ||
ಯೋಗ ಕೊಟ್ಟಿಹ ಸ್ವಸ್ಥ ಬದುಕನು ನುಂಗದಿರಲಿ ಮಲಿನತೆ
ನಾಗರೀಕತೆ ಮೆರಗು ತರಲಿ ನಗರದಲ್ಲಿನ ಶುಭ್ರತೆ
ಬಡವ ಬಲ್ಲಿದ ಭೇದ ತೊಡೆದಿಹ ಯೋಗದಿಂದಲೇ ಧನ್ಯತೇ
ಬೆಂಗಳೂರಿಗೆ ಭಂಗತಾರದೇ ಕೂಡಿ ಮಾಡುವ ಸ್ವಚ್ಛತೆ || 1 ||
ಸಾಮರಸ್ಯವು ಸ್ನೇಹ ಪ್ರೀತಿಯು ಯೋಗದದ್ಭುತ ಸಾಧನೆ
ಅಂತರಾಳದ ರಾಡಿ ಎಲ್ಲವ ಕೊಚ್ಚಿ ಕಳೆಯುವ ಭೋದನೆ
ಸ್ವಂತವಿಲ್ಲದೆ ಪರರ ಹಿತಕೆ ನಿರತ ಮಡಿಯುವ ಚಿಂತನೆ
ಯೋಗದಿಂದಲೇ ರೋಗ ಮುಕ್ತಿಯು ವಿಶ್ವಶಾಂತಿಯ ಸ್ಥಾಪನೆ || 2 ||