ಹಿಂದುಸ್ಥಾನದ ಚಿರ ನವ ಹರಯವೆ, ಹೇ ಹೈಮಾಚಲ ಸಂದರ್ಶನವೆ
ಇದೋ ಉದ್ಭವಿಸಿದೆ ಪ್ರಾಣಪ್ರವಾಹವು, ಯುವಜನ ಜಾಹ್ನವಿ ಸಿಂಧೂಬಲವು || ಪ ||
ರಣಮತ್ತರ ಬಿಸಿನೆತ್ತರ ಬಾಹುವೆ, ಓ ನಾಡಿನ ಯೌವನ ಸಿಡಿದೇಳು
ರಾಷ್ಟ್ರದ ನೇತ್ರ ತೃತೀಯ ಸ್ವರೂಪವೆ, ತಾರುಣ್ಯವೇ ಉರಿಗಣ್ ತೆರೆ ಏಳು || 1 ||
ದೃಢ ನಿಶ್ಚಯದೊಳು ಹೃತ್ಪರ್ವತಗಳು, ಕೋಟ್ಯಂತರ ನಿಂತಿರೆ ರಾಷ್ಟ್ರದಲಿ
ದುರ್ಗಮ ದುರ್ಗಗಳೆಚ್ಚರಗೊಳುತಿವೆ, ಅರಿಗೆಂದಿಗು ದೊರೆಯದು ಜಯವಿಲ್ಲಿ || 2 ||
ಕಿಡಿ ಹಾರಿದೆ ಸಿಡಿಮದ್ದಿನ ನಿದ್ದೆಗೆ, ಧುಮಧುಮ ಧುಮಗುಡುತಿದೆ ಧುರಭೇರಿ
ಜನಜನರೆದೆಯೊಳು ಧಗಧಗ ಧಗಸಿದೆ, ಭೀಷಣ ರಣಬೆಂಕಿಯು ಓ ವೈರಿ || 3 ||
ಮೃತ್ಯುಂಜಯ ಜನ ಹೃದಯ ಹಿಮಾಲಯ, ಮೈ ತಾಳಿದೆ ಇದು ಪ್ರದೀಪ್ತ ವಲಯ
ಹೃನ್ಮಹಿಮಾಲಯ ಅರಿಯ ಯಮಾಲಯ, ಬೆಳೆಬೆಳೆದಿದೆ ಇದು ಸುಷುಪ್ತ ಪ್ರಲಯ || 4 ||