ಹರಿಸುತಿರು ಹಸನದೆಡೆ

ಹರಿಸುತಿರು ಹಸನದೆಡೆ ಅಂತರಂಗದ ಶಕ್ತಿ
ಬಾಳ ಹಣತೆಯ ಉರಿಸಿ ಒಡೆದು ಕತ್ತಲ ಭಿತ್ತಿ || ಪ ||

ಮನದ ಕಳೆಯನು ಕಿತ್ತು ಗುಣದ ಮಣ್ಣನು ಉತ್ತು
ಸತ್ವಫಲವನು ಕೊಡುವ ತತ್ವ ಬೀಜವ ಬಿತ್ತಿ
ಹಿರಿಯರಾಶಯದಾಳಕೆ ಇಳಿಸು ಭಾವದ ಬೇರು
ತನುವ ತರುವೀಯಲಿ ಫಲಭರಿತ ಬುತ್ತಿ || 1 ||

ಪಯಣವಿದು ಕೆಲ ಹೊತ್ತು ಹಂಚು ಬುತ್ತಿಯ ತುತ್ತು
ನೀಡು ಹಾಲಾಹಲದ ಮತ್ಸರಕೆ ಮುಕ್ತಿ
ಸತ್ಯ ಸರಳತೆಯ ಸೊತ್ತು ಅಳಿಸು ಅಹಮಿನ ಗತ್ತು
ಸೋಲದೆಯೆ ಗುರಿಯೆಡೆಗೆ ತೋರುತಿರು ಯುಕ್ತಿ || 2 ||

ಗಂಗೆತುಂಗೆಯ ನೀರು ಹಚ್ಚ ಹಸುರಿನ ಪೈರು
ಉಣಿಸಿ ಬೆಳೆಸಿದ ತಾಯ ಪದವ ಕಣ್ಗೊತ್ತಿ
ಮೇರು ಶಿಖರವ ಮೀರು ಪರಮ ವೈಭವಕೇರು
ಧ್ಯೇಯ ದೇವನ ಎದುರು ಮೈದೆಳೆದು ಭಕ್ತಿ || 3 ||

Leave a Reply

Your email address will not be published. Required fields are marked *

*

code