ಸೇವೆಯ ಸಾಧಕರಾಗೋಣ

ಸೇವೆಯ ಸಾಧಕರಾಗೋಣ
ಜೀವನ ಸಾರ್ಥಕಗೊಳಿಸೋಣ
ಸೇವಾ ಹಿ ಪರಮೋ ಧರ್ಮಃ | ಸೇವಾ ಹಿ ಪರಮೋ ಧರ್ಮಃ || ಪ ||

ನೆಲದಲಿ ಜಲದಲಿ ಜಡಚೇತನದಲಿ
ನೆಲೆಸಿಹುದೆಲ್ಲೆಡೆ ದೈವಾಂಶ
ಫಲವನು ಬಯಸದೆ ಸೇವೆಯ ಗೈಯಲು
ಸುಲಭವು ಸಾತ್ವಿಕ ಸಂತೋಷ
ಈಶಾವಾಸ್ಯಮಿದಂ ಸರ್ವಂ | ಈಶಾವಾಸ್ಯಮಿದಂ ಸರ್ವಂ || 1 ||

ದೊರೆಯಲಿ ಹಸಿದವರೆಲ್ಲರಿಗನ್ನ
ಆಸರೆ ಶಿಕ್ಷಣ ಆರೋಗ್ಯ
ಸರಿಸಮ ಗೌರವ ಸ್ವಾವಲಂಬನ
ಸಮರಸ ಬಾಳಿನ ಸೌಭಾಗ್ಯ
ಸರ್ವೇ ಭವಂತು ಸುಖಿನಃ | ಸರ್ವೇ ಸಂತು ನಿರಾಮಯಾಃ || 2 ||

ಸೇವೆಯಿಂದ ದೂರಾಗಲಿ ವ್ಯಸನ
ನೀಗಲಿ ಅಸಮಾನತೆ ಕೊರತೆ
ಸೇವಾಭಾವವು ತುಂಬಲಿ ಜನಮನ
ನೋವೆಲ್ಲವ ಮರೆಯಲಿ ಜನತೆ
ಕಾಮಯೇ ದುಃಖತಪ್ತಾನಾಂ | ಪ್ರಾಣಿನಾಮಾರ್ತಿನಾಶನಂ || 3 ||

ಸೇವಾಭಾವವು ದೈವೀ ಸಂಪದ
ಸಹಜವು ಹಿಂದು ಪರಂಪರೆಗೆ
ಆವುದೆ ಹಿರಿತನ ಕಿರಿತನವಿಲ್ಲದೆ
ಸೇವೆಯ ಗೈವುದೆ ನಿಜಪೂಜೆ
ಜೀವನೇ ಯಾವದಾದಾನಂ| ಸ್ಯಾತ್ ಪ್ರದಾನಂ ತತೋsಧಿಕಂ || 4 ||

Leave a Reply

Your email address will not be published. Required fields are marked *

*

code