ಸುಂದರವು ನಮ್ಮೀ ಸನಾತನ

ಸುಂದರವು ನಮ್ಮೀ ಸನಾತನ ಹೆಮ್ಮೆ ಹಿಂದೂ ಪದ್ಧತಿ
ಹಂದರವು ಬಂಧುಗಳು ತಮ್ಮಲಿ ಬೆಸೆವ ಸುಂದರ ಸಂಸ್ಕೃತಿ      || ಪ ||

ಜನನಿ ಜನ್ಮದಭೂಮಿ ನಮ್ಮಯ ನಾಕವೆಂದಿಹ ರಾಮನು
ಮನನ ಮಾಡೆಲೊ ನಿಜಸ್ವರೂಪವನೆಂದು ಸಾರಿದ ಕೃಷ್ಣನು
“ಕರ್ಮದಲಿ ನೀನಿಲ್ಲದರ ಫಲದಾಸೆ ತೊರೆ” ಯೆಂದಿಹ ಕರೆ
ಧರ್ಮಮಾರ್ಗದಿ ಜೀವ ಪೊರೆದಳು ಭರತಭೂಮಿ ವಸುಂಧರೆ‌  || 1 ||

ಚಂದ್ರಗುಪ್ತನ ಶೌರ್ಯಕೆ ಚಾಣಕ್ಯ ಪಂಡಿತಬೋಧನೆ
ಇಂದ್ರಸದೃಶ ಶಿವಾಜಿಗೈದರು ರಾಮದಾಸಾರಾಧನೆ
ಮಂದ್ರಹಿಂದೂ ದನಿಯದೇರಿತು ತಾರಕಕೆ ಋಷಿತಪದಲಿ
ವಂದೇಮಾತರಂ ಗೀತೆ ರಚಿಸಿದ ವಂಗಬಂಧುವಿನುಲಿಯಲಿ     || 2 ||

ಯಮನ ಮನೆಯೊಳು ಜ್ಞಾನವರಸಿದ ಬಾಲಕ ನಚಿಕೇತರ
ಯಮಸದೃಶ ಮ್ಲೇಚ್ಛರನು ಮೆಟ್ಟಿದ ಜೋರಾವರಾ ಫತೇಸಿಂಹರ
ಸಮವದಾರಿಹರೀ ಜಗದಿ ಭಾರತದ ಪುರುಷಸಿಂಹರ
ವಿಮಲ ಭಾರತ ವಿಶ್ವಗುರುವಿನ ಪೀಠದಲಿ ಅಜರಾಮರ           || 3 ||

Leave a Reply

Your email address will not be published. Required fields are marked *