ಜಯ ಜಯವು ಹೇ ಕಲಿ ಪ್ರತಾಪನೆ

ಜಯ ಜಯವು ಹೇ ಕಲಿ ಪ್ರತಾಪನೆ
ಜಯವು ನಿನ್ನ ಪ್ರತಾಪಕೆ
ಧ್ಯೇಯ ಯಾತ್ರಿಕರರಸು ಗೌರವ
ಕಾಯ ನೀನೆಮ್ಮ ರಾಷ್ಟ್ರಕೆ || ಪ ||

ಚೇತಕವನೇರುತಲಿ ದೇಶದ
ಜಾತಕವ ಬದಲಾಯಿಸಿ
ಘಾತುಕರ ಬೆಂಡೆತ್ತಿ ಕೀರ್ತಿಯ
ಕೇತನವ ಮೇಲೆತ್ತಿಸಿ…
ಮಾತುಕೃತಿಗಳನೊಂದು ಮಾಡಿಹ
ಚೇತನನು ನೀ ರಾಷ್ಟ್ರಕೆ
ಸೋತು ಸೊರಗಿದನಕ್ಬರನು
ನಿರ್ಭೀತ ನಿನ್ನ ಪ್ರತಾಪಕೆ || 1 ||

ನಾಡಕಟ್ಟಲು ನಾಡ ತ್ಯಜಿಸುತ
ಕಾಡಿನೊಳಗಲೆದಾಡುತ
ಬೇಡಜನ ಪಡೆಕಟ್ಟಿಯರಿ
ಕಾರ್ಮೋಡ ಕರಗಿಸಿ ಬೀಗುತ
ಪಾಡುಪಡುತಲಿ ಸತಿಸುತರ
ಕಾಪಾಡಿಕೊಳ್ಳುತ ಕಾದುತ
ಮೋಡಿಮಾಡಿದ ರಣಪ್ರತಾಪಿಗೆ
ನಾಡಿದೋ ಶರಣಾಗತ || 2 ||

ಏಸುಜನುಮವು ಬರಲಿ ನೀನು
ಅಸೀಮ ಶೌರ್ಯದ ವಾರಿಧಿ
ವಾಸುದೇವನ ಗೀತೆಯೊಲು
ಆವಾಸಿ ನೀ ನಮ ಹೃದಯದಿ
ದಾಸರಾಗಿಸಿತೆಮ್ಮ ಜನರಾ
ದೋಷಿಯಾಂಗ್ಲ ವಿಚಾರತೇ
ಆಶೆಯೊಂದೆ ನಮ್ಮ ಜನರ
ಮನೀಷೆಗೊದಗಲಿ ನಿನ್ನ ಕತೆ || 3 ||

Leave a Reply

Your email address will not be published. Required fields are marked *