ಜಡತೆಯನು ಕೊಡಹುತಲಿ

ಜಡತೆಯನು ಕೊಡಹುತಲಿ ಮೇಲೆದ್ದೇಳು ಹಿಂದುಕೇಸರಿ
ದೃಢತೆಯನು ತಳೆ ಧ್ಯೇಯಮಾರ್ಗದಿ ಚಿರಪುರಾತನ ರಣಕಲಿ || ಪ ||

ಮರೆಯದಿರು ನೀನಿಂದ್ರಪ್ರಸ್ಥದ ಪಾಂಡವರ ಕುಡಿಯೆಂಬುದ
ಅರಿಯುತಿರು ಚಾಣಕ್ಯ ಮೌರ್ಯರ ವಾರಸಿಗ ನೀನೆಂಬುದ
ಬರವದೇತಕೆ ಬಂತು ನಿನ್ನಲಿ ಛತ್ರಪತಿ ಶಿವ ಶೌರ್ಯದ
ಕರದೊಳೇತಕೆ ಮಾಯವಾಯಿತು ರಣಪ್ರತಾಪನ ಆಯುಧ || 1 ||

ಭಾರತದ ಅವನತಿಗೆ ಕಾರಣ ಮಾಯವಾಗಿಹ ಕ್ಷಾತ್ರತೆ
ಮೇರುಸದೃಶ ಪರಾಕ್ರಮವು ಪಾತಾಳಕಿಳಿದಿಹ ದೈನ್ಯತೆ
ಏರು ಮೇಲೇರೇರು ತೋರುತ ನಿನ್ನ ಕ್ಷಾತ್ರಪರಂಪರೆ
ಸಾರು ಭಾರತ ಬ್ರಹ್ಮಕ್ಷಾತ್ರದ ಸಾಮರಸ್ಯ ಮಹಾಧರೆ || 2 ||

ನೀನೆ ವಾರಸುದಾರನೀಗ ಸುದೀರ್ಘ ಹಾದಿಯ ಪಯಣಕೆ
ನೀನೆ ವೀರ ಸಮೀರ ಮಾರುತ ರಾಷ್ಟ್ರಸೌರಭ ಪ್ರಸರಕೆ
ಧ್ಯಾನವಸ್ತುವದಾಗಲೆಂದಿಗು ಭರತಮಾತೆಯ ವೈಭವ
ಮೀನ ಮೇಷಗಳೆಣಿಸದೆಯೆ ಹಿಡಿ ಭಾರತದಹಿತ ವಾದವ || 3 ||

Leave a Reply

Your email address will not be published. Required fields are marked *