ಉರಿಸೋ ಧ್ಯೇಯದೀಪ, ಜನಮನದ ಆಳದಲ್ಲಿ
ಹರಿಸೋ ಅಮೃತಧಾರಾ, ವಿಷಮಯ ಪಾತಾಳದಲ್ಲಿ || ಪ ||
ದೀನ ದಲಿತ ಜನರ ಜೊತೆಗೂಡಿ ಸಾಗು ಮುಂದೆ
ಒಂದೇ ತಾಯಿ ನೆಲವು ನಮ್ಮೆಲ್ಲ ಗುರಿಯು ಒಂದೆ
ತೆರೆಸೋ ಹೃದಯದ್ವಾರ ವಿಭ್ರಾಂತ ಜನಗಳಲ್ಲಿ
ಹರಿಸೋ ಸ್ನೇಹಪೂರ ಭ್ರಮೆಯಾಂತ ಮನಗಳಲ್ಲಿ || 1 ||
ಶಿಲೆಯು ಕಲೆಯಧರಿಸಿ ಇತಿಹಾಸ ಒರೆಯುತಿಹುದು
ಹಿಂದೂ ಜನತೆಯಿಂದು ನಾಡನ್ನೆ ಮರೆಯುತಿಹುದು
ಮೆರೆಸೋ ರಾಷ್ಟ್ರಧ್ವಜವ ಉನ್ನತಿಯ ಬಾನಿನಲ್ಲಿ
ಸ್ಮರಿಸೋ ನಾಡ ಹಿರಿಮೆ ಅನುದಿನವೂ ಬಾಳಿನಲ್ಲಿ || 2 ||
ಬಲವ ಗಳಿಸಲೊಂದೇ ಸಾಧನವು ಸಂಘಟನೆಯು
ಗೆಲುವ ಛಲದ ಕುಲಕೆ ಎಂದೆಂದೂ ಇಲ್ಲ ಕೊನೆಯು
ಧರಿಸೋ ವೀರತೊಡುಗೆ ಹೋರಾಡು ಸಮರದಲ್ಲಿ
ಸರಿಸೋ ಹೇಡಿತನವ ಸಂಕಟದೀ ಸಮಯದಲ್ಲಿ || 3 ||