ಶತಮಾನದ ಶುಭ ಆಶಯದೆಡೆಗೆ

ಶತಮಾನದ ಶುಭ ಆಶಯದೆಡೆಗೆ ದಶಮಾನದ ಅಭಿಮಾನದ ನಡಿಗೆ
ಉರುಳಿತು ಭರದಲಿ ಕಾಲಚಕ್ರ ಮೊಳಗಿತು ಎಲ್ಲೆಡೆ ಸೇವೆಯ ಮಂತ್ರ
ಲೋಕಹಿತಂ ಮಮ ಕರಣೀಯಮ್ || ಪ ||

ಪಶ್ಚಿಮ ಜಲಧಿಯ ಲಕ್ಷಲಹರಿಗಳು ನಿಶ್ಚಲವಾಗುವುದುಂಟೇನು ?
ಅಕ್ಷಯ ಸ್ಪೂರ್ತಿಯ ಯುವಜನಶಕ್ತಿಯು ನಿಷ್ಪಲವಾಗುವುದುಂಟೇನು ?
ಮೊರೆಯಿತು ಧ್ಯೇಯದ ಭವ್ಯ ಸಮುದ್ರ ಮೊಳಗಿತು ಎಲ್ಲೆಡೆ… || 1 ||

ತೊಟ್ಟಿಲ ತೂಗುವ ಕೋಮಲಕರಗಳು ಕಟ್ಟಲು ಬಲ್ಲವು ರಾಷ್ಟ್ರವನು
ಕಟ್ಟಿದ ಅಬಲೆಯ ಪಟ್ಟವ ಕಳಚಿ ಮುಟ್ಟಲು ಬಲ್ಲವು ಲಕ್ಷ್ಯವನು
ಸಾರುತ ನಾರಿಯ ನೂತನ ಪಾತ್ರ ಮೊಳಗಿತು ಎಲ್ಲೆಡೆ… || 2 ||

ಗುಡಿಸಲ ಗೂಡಿನ ದುಡಿಮೆಯ ಜಾಡಿನ ಒಡಲಿನ ಪಾಡಿಗೆ ಸ್ಪಂದಿಸುತಾ
ಹಿಂದುತ್ವದ ಬಂಧುತ್ವದ ಸುಂದರ ಸೂತ್ರದೊಳೆಲ್ಲರ ಬಂಧಿಸುತಾ
ಅಳಿಸಲು ನಾಡಿನ ನೋವಿನ ಚಿತ್ರ ಮೊಳಗಿತು ಎಲ್ಲೆಡೆ…. || 3 ||

ಸುರವಾಣಿಯ ಸುಮಧುರ ಸಂಭಾಷಣ ಇದು ಸುಜ್ಞಾನಕೆ ರಹದಾರಿ
ಮೌಲ್ಯಂಗಳ ಸಂರಕ್ಷಣೆಗೈಯಲು ಗೋಚರಿಸಿದೆ ಘನತೆಯ ದಾರಿ
ರೂಪಿಸಿ ಹೃದಯವ ಗೆಲ್ಲುವ ತಂತ್ರ ಮೊಳಗಿತು ಎಲ್ಲೆಡೆ…. || 4 ||

ಯತಿ ವಿಶ್ವೇಶರ ಪಥ ನಿರ್ದೇಶನ ಕೃತಿಯೊಳು ತುಂಬಿದೆ ಭೀಮಬಲ
ಪೂರ್ಣಸಮರ್ಪಿತ ಸೇವಾವ್ರತಿಗಳ ಸೇನೆಯು ಶ್ರಮಿಸಿದೆ ನಾಡಗಲ
ವಿಸ್ತೃತವೆಮ್ಮಯ ಕಾರ್ಯಕ್ಷೇತ್ರ ಮೊಳಗಿತು ಎಲ್ಲೆಡೆ… || 5 ||

ಮನಸಾ ಸತತಂ ಸ್ಮರಣೀಯಮ್
ವಚಸಾ ಸತತಂ ವದನೀಯಮ್
ಲೋಕಹಿತಂ ಮಮ ಕರಣೀಯಮ್

(ಹಿಂದು ಸೇವಾ ಪ್ರತಿಷ್ಠಾನದ ದಶಮಾನೋತ್ಸವ ಕಾರ್ಯಕ್ರಮಕ್ಕೆ ರಚಿಸಿದ್ದು)

Leave a Reply

Your email address will not be published. Required fields are marked *