ಪಾಂಚಜನ್ಯದ ಕರೆಗೆ ಕರಗಿತು
ದ್ವಾಪರದ ಆ ಕುರುಕುಲ
ಹರಿಯು ಉರಿಸಿದ ಧೈರ್ಯ ದೀಪ್ತಿಗೆ
ಬೆಳಗಿ ಧರ್ಮದ ದೇಗುಲ || ಪ ||
ಅವನ ಕೆಲಸಕೆ ಮತ್ತೆ ಹೊರಟಿದೆ.
ಭರತ ಖಂಡ ಮನುಕುಲ
ಮಾತೃ ವ್ಯಾಕುಲ ಕಳೆಯೆ ಕಲೆತಿದೆ
ಕಲಿಯ ಕಲಿಗಳ ಸಂಕುಲ || 1 ||
ಬೆರಳು ನಲಿಯಲು ಉಲಿವ ಕೊಳಲಲು
ಸ್ವಾಭಿಮಾನದ ಸರಿಗಮ
ಏರುಇಳಿತದ ಸಪ್ತ ಸ್ವರದಲಿ
ಸಾಮರಸ್ಯದ ಸಂಗಮ || 2 ||
ಪಣವ ಆನಕ ಶಂಖ ಗೋಮುಖ
ರಣದ ಭೇರಿಯ ವಾದನ
ಸ್ಫೂರ್ತಿ ಪ್ರಣತಿಯ ಬೆಳಗಿ ಮಾತೆಯ
ಚರಣಕಿದೋ ಅಭಿವಾದನ || 3 ||
ಅರಿಯ ತರಿಯುತ ಜಗದಿ ಮೆರೆಯುವ
ವೀರವಾಂಛೆಯ ಧಾರಣ
ಕದನ ಕಣಕೆದುರಾಗಿ ಹೊರಟಿಹ
ವಿಜಯ ರಥದಾರೋಹಣ || 4 ||