ನವಭಾವ ನವಜೀವ ನವಶಕ್ತಿ ತುಂಬಿಸುವ ಹಾಡೊಮ್ಮೆ ಹಾಡಬೇಕು
ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರಧ್ವನಿ ಏರಬೇಕು || ಪ ||
ಉನ್ನತೋನ್ನತ ಘನಹಿಮಾಗ್ರಿ ಶಿಖರವನೇರಿ ಹಾಡಲ್ಲಿ ಹಾಡಬೇಕು
ಹಾಡು ನುಡಿಗುಂಡುಗಳು ಹಾರಿದಶದಿಕ್ಕಿನಲಿ ಭಯವಬೆನ್ನಟ್ಟಬೇಕು
ಗಂಡೆದೆಯಘರ್ಜನೆಗೆ ಮೂಹತ್ತು ಮೂರ್ಕೋಟಿ ಕಲಕಂಠ ಬೆರೆಸಬೇಕೂ
ಭೂಮ್ಯಾಂತರಾಳದಲಿ ನಭಚಕ್ರಗೋಳದಲಿ ಮಾರ್ದನಿಗಳೇಳಬೇಕು || 1 ||
ಜಡನಿದ್ರೆ ಸಿಡಿದೆದ್ದ ವೀರಾಟ್ಟಹಾಸದಲಿ ಬಾನುಭುವಿ ಬೆಳಗಬೇಕು
ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ ಕ್ರಾಂತಿಕಿಡಿ ಕೆರಳಬೇಕು
ಅಳಿದುಳಿದ ಭವ್ಯತೆಯ ರುದ್ರ ಶಿಖೆಯುಜ್ವಲಿಸೆ ಹಾಡು ತಿದಿಯೊತ್ತಬೇಕೂ
ದಿವಸ ದಿವಸಗಳಿಂದ ಮನದಿ ಮರುಗುತಲಿದ್ದ ಹಾಡಿಂತು ಹಾಡಬೇಕು || 2 ||
ರಚನೆ – ಶ್ರೀ ಕಯ್ಯಾರ ಕಿಂಞಣ್ಣ ರೈ