ಕಟ್ಟಬನ್ನಿ ತರುಣರೇ ನವಭಾರತ ದೇಶವ

ಕಟ್ಟಬನ್ನಿ ತರುಣರೇ ನವಭಾರತ ದೇಶವ
ಸ್ವತ್ವ ಸ್ವಾಭಿಮಾನಭರಿತ ಶಕ್ತಿವಂತ ರಾಷ್ಟ್ರವ… ನವಭಾರತ ದೇಶವ || ಪ ||

ಕಿತ್ತುಬಿಸುಟು ಸುತ್ತಲಿರುವ ವಿಷಮ ವಿಷದ ಕಳೆಯನು
ಬಿತ್ತಿ ಬೆಳೆದು ತನ್ನತನದ ಹೊನ್ನಿನಂಥ ಬೆಳಯನು
ಚಿತ್ತದಲ್ಲಿ ಮನೆಯ ಮಾಡಿದಂಥ ಭ್ರಮೆಯ ತೊಲಗಿಸಿ
ಕತ್ತಲನ್ನು ದೂರಗೊಳಿಸಿ ಧ್ಯೇಯದೀಪ ಬೆಳಗಿಸಿ || 1 ||

ಜಗಕೆ ಅನ್ನ ನೀಡಬಲ್ಲ ಸಾಮರ್ಥ್ಯವು ನಮಗಿರೆ
ಕರದೊಳೇಕೆ ಭಿಕ್ಷಾಪಾತ್ರೆ ಅನ್ನಪೂರ್ಣೆ ಈ ಧರೆ
ಗಂಗೆ ತುಂಗೆ ಹರಿವ ನೆಲದಿ ಬೇಕೆ ಹಂಗಿನರಮನೆ |
ಬೆವರು ಸುರಿಸಿ ಸಾಧಿಸೋಣ ಪ್ರಗತಿ ಸ್ವಾವಲಂಬನೆ || 2 ||

ನಮ್ಮ ಸಿರಿಯ ದೋಚಲೆಂದು ಹಾಕುತಿಹರು ಹೊಂಚನು
ಸುಮ್ಮನಿರದೆ ವಿಫಲಗೊಳಿಸಿ ಬಹುರಾಷ್ಟ್ರದ ಸಂಚನು
ನಾಡನೊಡೆವ ಮಂದಿಯೊಡನೆ ಒಪ್ಪಂದವು ಸಲ್ಲದು
ಸ್ವದೇಶ ನಿಷ್ಠೆಯೊಂದೆ ನಮ್ಮ ಕಾಪಾಡಬಲ್ಲದು || 3 ||

ದೀನರಲ್ಲ ನಾವು ಮತಿವಿಹೀನವಲ್ಲ ಭಾರತ
ಸೋಲನೆಂದೂ ಒಲ್ಲೆವೆಂದು ವಿಶ್ವಕೆಲ್ಲ ಸಾರುತ
ಗ್ರಾಮಗ್ರಾಮಗಳನು ಸುತ್ತಿ ಗೈದು ಜನಜಾಗೃತಿ
ನಿರ್ಮಿಸೋಣ ಸ್ವಾಭಿಮಾನ ಸಂಪನ್ನ ಸಂಸ್ಕೃತಿ || 4 ||

Leave a Reply

Your email address will not be published. Required fields are marked *