ಕಾಯಾವಾಚಾ ಮನಸಾ ಮಾತೆಯ ಸೇವೆಯ ಮಾಡುವೆವು |
ನಮ್ಮಯ ಕೊನೆಯುಸಿರಿರುವನಕ ನಾಡಿಗಾಗಿ ಹೋರಾಡುವೆವು |
ನಾಡಿಗಾಗಿಯೇ ದುಡಿಯುವೆವು ನಾಡಿಗಾಗಿಯೇ ಮಡಿಯುವೆವು || ಪ ||
ಇಲ್ಲಿದೆ ಬಾಳಿನ ನೂತನ ಅರ್ಥ
ಸುಮ್ಮನೆ ಕಳೆಯದೆ ದಿನಗಳ ವ್ಯರ್ಥ
ಕಾರ್ಯಕ್ಷೇತ್ರಕೆ ಧುಮುಕುವೆವು
ಬಿಡುವಿಲ್ಲದೆ ಪರಿಶ್ರಮಿಸುವೆವು || 1 ||
ನಮ್ಮಯ ಹಿರಿಯರು ತೋರಿದ ಹಾದಿ
ಸಾಧನೆಗದುವೇ ಭದ್ರಬುನಾದಿ
ವಿಘ್ನ ವಿರೋಧವ ಮೆಟ್ಟುವೆವು
ಭವ್ಯ ಸಮಾಜವ ಕಟ್ಟುವೆವು || 2 ||
ಗ್ರಾಮ ನಗರ ಗಿರಿಕಾನನಗಳಲಿ
ಸೇವಾವ್ರತಿಗಳ ಪಡೆಯು ಚಲಿಸಲಿ
ಸ್ನೇಹದೊಳೆಲ್ಲರ ಗೆಲ್ಲುವೆವು
ಸೇವೆಯ ಸೌರಭ ಚೆಲ್ಲುವೆವು || 3 ||