ಜಗಳವೇತಕೆ ಯುಗಳ ಭಾಷೆಯು
ಮಗಳ ಸಮವಹುದಾಕೆಗೆ
ಮುಗುಳು ನಗುತಲೆ ತೊದಲ ತಿದ್ದುವ
ದಾತೆ ಸಂಸ್ಕೃತ ಮಾತೆಗೆ || ಪ ||
ತಮಿಳು ಚಂದನ ಕಂಪು ಕನ್ನಡ
ಮುರಳಿನಾದದ ಕೈರಳಿ
ಅರಳಿ ನಗುತಿಹ ಸುಮಗಳೆನಿತಿವೆ
ಭರತಮಾತೆಯ ಬನದಲಿ || 1 ||
ಪ್ರತಿಪದವು ಪ್ರತಿ ಪದೆಯದಾಗಲಿ
ನವಶಕೆಯ ಶಶಿಯುದಿಸಲಿ
ಸೃಜಿಸಿ ಪದಗಳ ಕಾವ್ಯಕವನವ
ರಚಿಸಿ ಜನಮನ ನಲಿಯಲಿ || 2 ||
ವಿಭಜನೆಯ ಕಿಡಿ ಕೆಡುಕಿಗಲ್ಲದೆ
ಬದುಕಿಗೆಂದಿಗು ಸಲ್ಲದು
ಸಭ್ಯ ಸಜ್ಜನರೆಮ್ಮ ಜನತೆಯು
ಒಡಕು ಮಾತನು ಒಲ್ಲದು || 3 ||