ಹದಿಹರೆಯದ ಕುದಿ ಹೃದಯದ ಯುವಜನ
ಪರಿವರ್ತನೆಯನು ಬಯಸುತಿದೆ
ಅವರ ಎದೆಬಡಿತದ ಗತಿ ಮನ ಮಿಡಿತದ ಶ್ರುತಿ
ರಾಷ್ಟ್ರದ ಜತೆ ಮೇಳೈಸುತಿದೆ ಕಸವನು ಕಳೆಯುತ
ಮೇಲ್ಕೀಳರಿಮೆಯ ಕಸವನು ಕಳೆಯುತ
ಹಿಂದುತ್ವದ ಹೊಸ ಸಂಕ್ರಮಣ
ಹಳೆಹೊನ್ನಿಗೆ ಮರು ಮೆರುಗನು ನೀಡುತ
ವಸುಮತಿಯೊಡತಿಗೆ ಆಭರಣ
ಸಂಘದ ತರುವಿನ ಸಾಸಿರ ಶಾಖೆಗೆ
ಸಮರಸ ಸುಮಲತೆ ತಬ್ಬಿಹುದು
ವಿಕಸಿತ ಸುಮಗಳು ಚೆಲ್ಲಿಹ ಪರಿಮಳ
ದೇಶವಿದೆಶಕು ಹಬ್ಬಿಹುದು
ಕವನವೊ ಕಥನವೊ ಕಣದಲಿ ಕದನವೋ
ರಾಷ್ಟ್ರೋನ್ನತಿಯದೆ ಉದ್ದೇಶ
ಧರ್ಮದ ಕರೆಯಿದೆ ಕ್ಷಾತ್ರದ ನೆರವಿದೆ
ಮೊಳಗಿದೆ ಭಾರತ ಜಯಘೋಷ