ಗಂಗೆ ತುಂಗೆ ಹರಿವ ನಾಡು ನಮ್ಮ ಭಾರತ
ಸ್ವರ್ಗಕ್ಕಿಂತ ಮಿಗಿಲು ನಮ್ಮ ಭವ್ಯಭಾರತ || ಪ ||
ಬೆಳ್ಳಿಬೆಟ್ಟ ತಾಯ ಶಿರಕೆ ಹೊಳೆವ ಮುಕುಟವು
ಹಚ್ಚಹಸಿರ ಸಸ್ಯರಾಶಿ ದಿವ್ಯ ವಸ್ತ್ರವು
ಮೂರು ಜಲಧಿ ಒಂದುಗೂಡಿ ಪಾದತೊಳೆವವು
ಕೋಟಿ ಅಲೆಗಳಿಂದ ನಿತ್ಯ ಸ್ತುತಿಯ ಗೈವವು || 1 ||
ಉಷೆಯ ಉದಯರಾಗದೊಡನೆ ಬರುವ ನೇಸರ
ಹೊಸತು ಹುರುಪು ತುಂಬಿ ಅಳಿಸಿ ಮನದ ಬೇಸರ
ನಾಡಮೂಲೆ ಮೂಲೆಗಳಿಗೂ ಬೆಳಕ ಬೀರುತಾ
ಅಂಧಕಾರ ನೀಗಿ ನಿಶೆಗೆ ಅಂತ್ಯ ಸಾರುತಾ || 2 ||
ಜಗಕೆ ಜ್ಞಾನಧಾರೆ ಎರೆದ ವೇದ ಜನನಿಯು
ಪಶುಗಳಲ್ಲು ಪರಶಿವನ ಕಂಡ ಧರಣಿಯು
ಭಾಷೆ ವೇಷ ಭಿನ್ನ ಭಿನ್ನ ಏಕಸಂಸ್ಕೃತಿ
ಸತ್ಯಶಾಂತಿ ಪ್ರೇಮಮೂರ್ತಿ ತಾಯಿ ಭಾರತಿ || 3 ||