ಎನ್ನೆದೆಯ ಕದ ತೆರೆದು ಹೃನ್ಮನವ ಹದಗೊಳಿಸಿ

ಎನ್ನೆದೆಯ ಕದ ತೆರೆದು ಹೃನ್ಮನವ ಹದಗೊಳಿಸಿ
ಜಗದ ಹಿತದಾಕಾಂಕ್ಷೆ ಬೀಜ ಬಿತ್ತಿ
ಧನ್ಯಗೊಳಿಸಿದೆ ಬದುಕು ಪುಣ್ಯವಂತನು ನಾನು
ಕಣ್ತೆರೆಸಿದ ತಾಯೇ ನಿನಗೆ ನಮನ              || ಪ ||

ಭೋಗಕಿರಲೊಂದು ಮಿತಿ ತ್ಯಾಗದಿಂದಮೃತತ್ವ
ಸ್ವಂತ ಸುಖವನು ಮರೆತ ಸಂತವಾಣಿ
ಸ್ವಾರ್ಥ ಚಿಂತನೆ ತ್ಯಜಿಸಿ ತನು-ಧನಗಳನರ್ಪಿಸಿದೆ
ಮನವೆಲ್ಲಿ ಕಾಣಿಸದು ನಿನ್ನೊಳಗೆ ಲೀನ          || 1 ||

ಘನ ಪರಂಪರೆ ಇಹುದು ಶೌರ್ಯ-ಸಾಹಸಕಿಲ್ಲಿ
ಪಾರ್ಥನಿಗೆ ಸಾರ್ಥಕತೆ ರಣದ ಕಣದೀ
ಛತ್ರಪತಿಯ ಕಥನ ರಾಣ ನಡೆಸಿದ ಕದನ
ವಿಜಯನಗರದ ಸ್ಮರಣ ಹೃದಯ ಸ್ಫುರಣ        || 2 ||

ವಿಸ್ಮೃತಿಯ ಭಿತ್ತಿಯನು ಛಿದ್ರಗೊಳಿಸಿದೆ ತಾಯೆ
ಅಸ್ಮಿತೆಯ ಜಾಗರಣ ಆತ್ಮದರಿವು
ಪರಹಿತ ಚಿಂತನೆಯೆ ಆತ್ಮದುನ್ನತಿಯ ಪಥ
ವಿಶ್ವದೇಕಾತ್ಮತೆಯೇ ಹಿಂದು ಮಂತ್ರ             || 3 ||

Leave a Reply

Your email address will not be published. Required fields are marked *