ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು
ನಮ್ಮೀ ತಾಯ್ನೆಲವು
ದೇವೀ ನಿನ್ನಯ ಸೊಬಗಿನ ಮಹಿಮೆಯ ಬಣ್ಣಿಸಲಸದಳವು || ಪ ||
ಧವಳ ಹಿಮಾಲಯ ಮುಕುಟದ ಮೆರುಗು
ಕಾಲ್ತೊಳೆಯುತಲಿದೆ ಜಲಧಿಯ ಬುರುಗು
ಗಂಗಾ ಬಯಲಿದು ಹಸಿರಿನ ಸೆರಗು
ಕಣಕಣ ಮಂಗಲವು ನಮ್ಮೀ ತಾಯ್ನೆಲವು || 1 ||
ಕಾಶಮೀರದಲಿ ಸುರಿವುದು ತುಹಿನ
ರಾಜಸ್ಥಾನದಿ ಸುಡುವುದು ಪುಲಿನ
ಮಲಯಾಚಲದಲಿ ಗಂಧದ ಪವನ
ವಿಧವಿಧ ಹೂ ಫಲವು ನಮ್ಮೀ ತಾಯ್ನೆಲವು || 2 ||
ಹಲವು ಭಾಷೆ ನುಡಿ ಲಿಪಿಗಳ ತೋಟ
ವಿವಿಧ ಪಂಥ ಮತಗಳ ರಸದೂಟ
ಕಾಣಲು ಕಾಮನಬಿಲ್ಲಿನ ನೋಟ
ಬಗೆಬಗೆ ಸಂಕುಲವು ನಮ್ಮೀ ತಾಯ್ನೆಲವು || 3 ||
ಪುಣ್ಯವಂತರಿಗೆ ಇದುವೆ ನಾಕ
ಖಳರಿಗೆ ಆಗಿದೆ ಶಿವನ ಪಿನಾಕ
ಶರಣಾಗತರಿಗೆ ಆಭಯದಾಯಕ
ಯುಗಯುಗದೀ ನಿಲವು ನಮ್ಮೀ ತಾಯ್ನೆಲವು || 4 ||
ಗಂಗೆ ತುಂಗೆಯರ ಅಮೃತ ಸ್ತನ್ಯ
ಕುಡಿಸುತ ಮಾಡಿದೆ ಜೀವನ ಧನ್ಯ
ಮುಡಿಪಿದು ಬದುಕು ನಿನಗೆ ಅನನ್ಯ
ಕ್ಷಣಕ್ಷಣ ಬಲ ಛಲವು ನಮ್ಮೀ ತಾಯ್ನೆಲವು || 5 ||