ದಶಮಾನದ ಸಂಭ್ರಮ

ದಶಮಾನದ ಸಂಭ್ರಮ ದಶಮಾನದ ಸಂಭ್ರಮ
ಕೇಶವನಾ ಹರಕೆಯಿಂದ ಲೋಕಹಿತದ ಬಯಕೆಯಿಂದ
ರೂಪುಗೊಂಡ ಕುಂಜಕೆ ಪ್ರೇರಣೆಯ ಪುಂಜಕೆ
ದಶಮಾನದ ಸಂಭ್ರಮ ದಶಮಾನದ ಸಂಭ್ರಮ              || ಪ ||

ಬೆಳಗು ಸಂಜೆ ಭಗವೆರಶ್ಮಿ ಮಂಗಲಮಯ ಪರಿಸರ
ತೆರೆದ ಬಯಲು ಸೆಳೆವ ನಿಲುವು ನೋಟವಿದು ಮನೋಹರ
ವರವಿಶಾಲ ಕುಂಜಕೆ ಬೆಳಕಿನೊಂದು ಪುಂಜಕೆ               || 1 ||

ಬಾಲಮನಕೆ ಮೋದವೆರೆದು ತರುಣರೆದೆಗೆ ಸ್ಫೂರ್ತಿಯ
ಹಿರಿಯರೊಲಿದು ಹರಸುವಂತೆ ಬರೆದು ಮೇಲುಪಂಕ್ತಿಯ
ಗರಿಮೆ ಪಡೆದ ಕುಂಜಕೆ ಚೈತನ್ಯದ ಪುಂಜಕೆ                 || 2 ||

ಹಸಿರು ಹೊತ್ತ ಹೂಗಿಡ ಮರ, ಮಾತೃಕೇಂದ್ರ ಶಿಶುಮಂದಿರ
ಗ್ರಂಥಾಲಯ ಕಾರ್ಯಾಲಯ ಸಂಚಾರಿ ಚಿಕಿತ್ಸಾಲಯ
ಹಬ್ಬಿ ಬೆಳೆದ ಕುಂಜಕೆ ವಿಮಲ ಯಶೋಪುಂಜಕೆ             || 3 ||

‘ಕಾಯಕವೇ ಕೈಲಾಸ’ವ ಕರ್ಮರಂಗಕಿಳಿಸುವ
ಇವ ನಮ್ಮವ, ಇವ ನಮ್ಮವ- ಸದ್ವಿಚಾರ ಮಂಟಪ
ಮುಕ್ತಹೃದಯ ಕುಂಜಕೆ ಸಾತ್ವಿಕತೆಯ ಪುಂಜಕೆ              || 4 ||

ದೇಶಹಿತವೆ ಧ್ಯೇಯಸುಮನ ರಾಷ್ಟ್ರಭಕ್ತಿ ಗುಂಜನ
ನಿಜಸಮಾಜಸೇವೆ ಸ್ನೇಹ-ಸಂಘಭಾವ ಸಿಂಚನ
ನಿರತ ನಡೆವ ಕುಂಜಕೆ ಪೂರ್ಣಪ್ರಭೆಯ ಪುಂಜಕೆ             || 5 ||

(ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಕಾರ್ಯಾಲಯ ‘ಕೇಶವಕುಂಜ್’ ದಶಮಾನೋತ್ಸವ ಕಾರ್ಯಕ್ರಮಕ್ಕಾಗಿ ಬರೆದ ಗೀತೆ)

Leave a Reply

Your email address will not be published. Required fields are marked *