ಭಾವನೆಗೆ ಬಲವೇರಿ

ಭಾವನೆಗೆ ಬಲವೇರಿ ಕಲ್ಪನೆಯು ಗರಿಗೆದರಿ
ಮಾತೃದರ್ಶನವಾಯ್ತು ಮಣ್ಣಿನಲ್ಲಿ
ನಿನ್ನ ಚರಣದೊಳೆನ್ನ ಹರಣವರ್ಪಣವೆಂಬ
ಭಾವದಂಕುರವಾಯ್ತು ಹೃದಯದಲ್ಲಿ || ಪ ||

ಕಾಯ ಬತ್ತಿಯು ಉರಿದು ಧ್ಯೇಯದಾರತಿ ಬೆಳಗೆ
ಲೇಖನಿಯ ಮಸಿಯದಕೆ ತೈಲವಾಯ್ತು
ಹಾಳೆಗಳ ಮೇಲುದಿಸಿದೊಂದೊಂದು ಅಕ್ಷರವೂ
ಸ್ಥೈರ್ಯದುಪಮೆಯನೀವ ಶೈಲವಾಯ್ತು || 1 ||

ಕವಿವಾಣಿಯೊಡನಿಂತು ಗಾಯಕನ ದನಿಗೂಡಿ
ರಣ ಕಹಳೆ ಎಲ್ಲೆಡೆಯು ಮರುದನಿಸಿತು
ಕಲಿತನವು ಎಚ್ಚೆತ್ತು ಯುವಜನತೆ ಘರ್ಜಿಸುತ
ಸಮರದುತ್ಸಾಹದಲಿ ಮುನ್ನುಗ್ಗಿತು || 2 ||

ಯುವ ಜನತೆ ನಿರ್ಮಿಸಿದ ಸ್ವಾತಂತ್ಯ ಸೌಧಕ್ಕೆ
ಅಕ್ಷರದ ಪುಂಜಗಳ ಕುಸುರಿ ಕಂಭ
ಪ್ರಾಸಾದದೆತ್ತರದಿ ಹೊಳೆವ ಕೀರ್ತಿಯ ಕಳಶ
ಗುಡಿಯೊಳಗೆ ಭಾರತಿಯ ಚೆಲುವ ಬಿಂಬ || 3 ||

ದಿಟದ ಇತಿಹಾಸವನು ಶ್ರುತಿ ಪಿಡಿದು ಜನರೆದುರು
ಸ್ವತ್ವ ಸಂಗೀತವನು ಹಾಡಬೇಕು
ಹಿಂದು ಜೀವನ ದೃಷ್ಠಿ ದರ್ಶನದ ಅನುಭೂತಿ
ಭಾರತದ ಬದುಕಿನಲಿ ಅರಳಬೇಕು || 4 ||

(ಉಜಿರೆ ಅ. ಭಾ. ಸಾ. ಪ. ದ ಸಮ್ಮೇಳನದಲ್ಲಿ ಹಾಡಿದ ಸಮ್ಮೇಳನಗೀತೆ)

Leave a Reply

Your email address will not be published. Required fields are marked *