ಭಾರತಿ ನನ್ನಯ ಭಾವಕೆ ಸಿಲುಕಿದ
ಪದಗಳ ನೀಪರಿ ಪೋಣಿಸಿಹೆ
ರಾಗಕೆ ಬರುವುದೋ ತಾಳಕೆ ಸಿಗುವುದೋ
ಭಾವಕೆ ಅರ್ಥವ ನಾನರಿಯೆ || ಪ ||
ನಿನ್ನಯ ಸಿರಿಮುಡಿಗೆರಗುವ ಅರ್ಹತೆ
ನನ್ನೀ ಹಾರಕೆ ಇಲ್ಲ ನಿಜ
ನಿನ್ನೆಯ ಮೊಗ್ಗಿದು ನಾಳೆಗು ಅರಳದೆ
ನಿನ್ನಯ ಪಾದದ ಪ್ರಭೆಯಿಂದ || 1 ||
ನಾನಿದ ಹಾಡೆನು ಹಾಡಿಸಲಾರೆನು
ಹಾಡುಗಾರನ ಹಂಗು ನನಗೇಕೆ
ಕಾಡಿನ ಗಿಡದೊಳಗರಳುವ ಕುಸುಮಕೆ
ಒಡೆಯನ ಗೊಡವೆಯು ಏತಕೆ ? || 2 ||
ಹೂವಲಿ ಚೆಲುವಿರೆ ಸವಿಮಧು ತುಂಬಿರೆ
ದುಂಬಿಯು ತಾನೇ ಬರದಿಹುದೇ
ಕಂಪನು ಸೂಸುವ ಹೊಸ ತುಳಸಿಯದಳ
ತೂಕವ ತೂಗಿಸದೆ || 3 ||