ಅಡಿಯಿಡು ಮುಂದೆ ಗುರಿಯೆಡೆಗಿಂದೇ
ನಿರ್ಧಾರದ ಕಾಲ ಬಂದಿದೆ
ಹಿಂದುರಾಷ್ಟ್ರದುತ್ಥಾನದ ಕಾಲ ಬಂದಿದೆ || ಪ ||
ಸಂಕಲ್ಪದ ಸಂತೋಷದಿ ತನುಮನ ಪುಳಕ
ಸಂಕ್ರಾಂತಿಯ ಸಂಧಾನವು ತರಲಿದೆ ಬೆಳಕ
ಧ್ಯೇಯದೃಷ್ಟಿಗೋಚರ, ಜಾರದಿರು ಇದೆಚ್ಚರ
ನಿರ್ಧಾರದ ಕಾಲ ಬಂದಿದೆ || 1 ||
ಕಜ್ಜಕಾಗಿ ಉಜ್ಜಗಿಸಲಿ ವಜ್ರಶರೀರ
ದುರ್ದೆಸೆಯನು ದೂರಗೊಳಿಸು ಉದ್ಯಮವೀರ
ಆಲಸ್ಯವನೋಡಿಸು, ಆದರ್ಶವ ಪಾಲಿಸು
ನಿರ್ಧಾರದ ಕಾಲ ಬಂದಿದೆ || 2 ||
ಜನರೆದೆಯಲಿ ಅನುರಣಿಸಿದೆ ಹಿಂದು ಸುಸ್ವರ
ತಮಹರಿಯಿತು ಜಗವರಿಯಿತು ಬಂದ ಭಾಸ್ಕರ
ತೊಲಗಲಿನ್ನು ವ್ಯಾಕುಲ, ಬೆಳಗು ರಾಷ್ಟ್ರದೇಗುಲ
ನಿರ್ಧಾರದ ಕಾಲ ಬಂದಿದೆ || 3 ||