ಗುರಿನೀಡಿ ಸಾಧನೆಗೆ ಬೆಂಬಲಕೆ ತಾನಿಂದ
ಕರಪಿಡಿದು ಗುರಿಯೆಡೆಗೆ ಅವನೆ ಕರೆತಂದ
ಗೂಢಜ್ಞಾನವನೆಮಗೆ ಕಲಿಸಿದನು ಗುರುದೇವ
ಒಂದೊಂದು ಅಕ್ಷರವೂ ಮೂಲಮಂತ್ರ
ಸ್ವಾನುಭವ ಮೂಸೆಯಲಿ ಅರಳಿರುವ ಜ್ಞಾನವದು
ಸಾಕ್ಷಿ ನೀಡುತಲೆಮಗೆ ಉಣಬಡಿಸಿದ
ಸಾಕ್ಷಿಪ್ರಜ್ಞೆಯನಿಟ್ಟ ಧರ್ಮಸೂಕ್ಷ್ಮದ ಮೇಲೆ
ಧರ್ಮವೇ ರಾಷ್ಟ್ರದ ಮೂಲವೆಂದು
ಕಾರ್ಯಗೈಯ್ಯುವುದೆಲ್ಲ ಧರ್ಮ ರಕ್ಷಣೆಗಾಗಿ
ಧರ್ಮವುಳಿಯಲೆಬೇಕು ರಾಷ್ಟ್ರಕೆಂದ
ಶಾಸ್ತ್ರವಿದ್ಯೆಯ ಜೊತೆಗೆ ಶಸ್ತ್ರದನುಸಂಧಾನ
ವ್ಯಕ್ತಿತ್ವ ನಿರ್ಮಿತಿಯು ರಾಷ್ಟ್ರಕೆಂದ
ಗುರಿಯೆಡೆಗೆ ನಡೆಯುತಿಹ ದಾರಿಯದು ದುರ್ಗಮವು
ಸ್ವಪ್ರಜ್ಞೆಯಲಿ ನಡೆದರೆ ಸುಖವು ಎಂದ