ರಾಷ್ಟ್ರದಾರಾಧನೆಗೆ ಕರೆಯಿದುವೆ ಬಂದಿಹುದು

ರಾಷ್ಟ್ರದಾರಾಧನೆಗೆ ಕರೆಯಿದುವೆ ಬಂದಿಹುದು
ಶ್ರಮ ಸಮಯವನ್ನೆಲ್ಲ ನೀಡಬನ್ನಿ
ಬದುಕು ನಶ್ವರವೆಂದು ಧ್ಯೇಯ ಶಾಶ್ವತವೆಂದು
ಹಿಂದುತ್ವದಡಿಯಲ್ಲಿ ದುಡಿಯಬನ್ನಿ
ಸ್ವಾರ್ಥವರಿಯದ ಬದುಕ ಬಾಳಬನ್ನಿ
ಓ ಬನ್ನಿ ಯುವಜನರೆ ಬೇಗಬನ್ನಿ

ಕೇಶವನು ತಾನುರಿದು ಕಿಡಿಯೊಂದನುರಿಸಿರಲು
ಪ್ರತಿ ಹಿಂದುವೆದೆಯಿಂದು ಅಗ್ಗಿಷ್ಟಿಕೆ
ಮಾಧವನ ಜೀವನದ ಹಣತೆಯಿದು ಬೆಳಗಿರಲು
ದೂರವಾಗಿದೆ ಸ್ವಾರ್ಥ ತನ್ನಷ್ಟಕೆ
ರಾಷ್ಟ್ರ ಯಜ್ಞಕೆ ಸಮಿಧೆಯಾಗಬನ್ನಿ
ಓ ಬನ್ನಿ ಯುವಜನರೆ ಬೇಗ ಬನ್ನಿ

ಹಿಂದುತ್ವದಸ್ಮಿತೆಗೆ ರಾಷ್ಟ್ರದೇಕಾತ್ಮತೆಗೆ
ಸಂಘಕಾರ್ಯದ ಸರಳ ಭಾಷ್ಯವಿಹುದು
ಅಂಜುವೆದೆ ನಮದಲ್ಲ ಗೊಂದಲವು ನಮಗಿಲ್ಲ
ನಂಜು ನುಂಗಿದ ಶಿವನ ವಂಶವೆಮದು
ಶಂಕೆ ಅಂಜಿಕೆ ದೂರ ಸರಿಸಿ ಬನ್ನಿ
ಓ ಬನ್ನಿ ಯುವಜನರೆ ಬೇಗ ಬನ್ನಿ

ಗುರು ಭಗವೆಯಡಿಯಲ್ಲಿ ನಿತ್ಯ ಸಾಧನೆ ನಮದು
ಶಕ್ತಗೊಳುತಿದೆ ನೈಜ ರಾಷ್ಟ್ರಭಕ್ತಿ
ಶತಮಾನ ಸಂದಿಹುದು ಸಂಘ ಕಾರ್ಯಕೆ ಇಂದು
ಪ್ರಕಟಗೊಂಡಿದೆ ಪ್ರಬಲ ಹಿಂದುಶಕ್ತಿ
ಸಂಘಸೂತ್ರದಿ ಬದುಕ ಹೊಸೆಯಬನ್ನಿ
ಓ ಬನ್ನಿ ಯುವಜನರೆ ಬೇಗ ಬನ್ನಿ

Leave a Reply

Your email address will not be published. Required fields are marked *