ಸಂಘ ಮಂದಿರವಿಂದು ಮೈತಳೆದು ನಿಂತಿಹುದು

ಸಂಘ ಮಂದಿರವಿಂದು ಮೈತಳೆದು ನಿಂತಿಹುದು
ಗರ್ಭಗುಡಿಯಲಿ ತಾಯ ದಿವ್ಯಮೂರ್ತಿ
ಭಂಗವಿಲ್ಲದ ಪೂಜೆ ಅನುದಿನವು ನಡೆದಿಹುದು
ಆರದಂತುರಿದಿಹುದು ಧ್ಯೇಯಜ್ಯೋತಿ

ದೇಗುಲದ ಭಿತ್ತಿಯೊಳು ಶಿಲೆಗಳಿವೆ ಹಲವುಬಗೆ
ಅಡಿಗಲ್ಲು ತಾನಾದ ಕೇಶವನು ಅಂದು
ಬಾಗಿಲದು ತೆರೆದಿಹುದು ಬೆಳಕಿಹುದು ಒಳಹೊರಗೆ
ಗುಡಿಯ ಮೆಟ್ಟಿಲು ಆದ ಮಾಧವನು ಅಂದು

ಮಂತ್ರ ತಂತ್ರಗಳಿರದ ಮುಗ್ಧಭಾವದ ಜೊತೆಗೆ
ಶ್ರಮ ಸಮಯಗಳೆ ಇಲ್ಲಿ ನೈವೇದ್ಯವು
ಯಾಂತ್ರಿಕತೆ ಸುಳಿವಿರದ ಅನುದಿನದ ಸಾಧನೆಗೆ
ಗುರುಭಗವೆಯಾ ದಿವ್ಯ ಸಾನ್ನಿಧ್ಯವು

ಪರಮವೈಭವಕಾಗಿ ಸಾಧನೆಯು ನಡೆದಿಹುದು
ಕೈಬೀಸಿ ಕರೆದಿಹುದು ಕಾರ್ಯಕ್ಷೇತ್ರ
ರಾಷ್ಟ್ರದಾರಾಧನೆಗೆ ಶತಮಾನ ಸಂದಿಹುದು
ತಾಯ್ನೆಲವೆ ನಮಗಿಂದು ತೀರ್ಥಕ್ಷೇತ್ರ

Leave a Reply

Your email address will not be published. Required fields are marked *