ಶಾರದೆಯ ಸದನವಿದು

ಶಾರದೆಯ ಸದನವಿದು ರಾಷ್ಟ್ರದೀಕ್ಷೆಯ ಭವನ
ಪೂರ್ಣತೆಯ ಪಥಿಕನಿಗೆ ದೀಪಗಂಬ
ತನ್ನರಿವ ತಾ ಗಳಿಸಿ ರಾಷ್ಟ್ರದುನ್ನತಿ ಬಯಸಿ
ಮುನ್ನಡೆವ ಸಾಧಕನ ಸ್ಫೂರ್ತಿ ಬಿಂಬ || ಪ ||

ಲೋಕ ಹಿತದಾಶಯದ ಋಷಿತುಲ್ಯ ಸಾಧಕರ
ಕಲ್ಪನೆಯ ಕುಸುಮಗಳು ಅರಳಿಹವು ಇಲ್ಲಿ.
ಕಾಯಿಗಳು ಮಾಗಿಹವು, ಸಫಲತೆಯ ಪಡೆದಿಹವು
ದಶದಿಶೆಗೆ ಏಕತೆಯ ಬೀಜ ಚೆಲ್ಲಿ || 1 ||

ಶೈಶವದ ತೊದಲ್ನುಡಿಗೆ, ಬಾಲ್ಯದಾಟದ ಮನಕೆ
ಹೊಸ ಶೋಧ ಕೆಳಸುತಿಹ ಯುವ ಮನಸಿಗೆ
ದೇಶವೇ ಮೊದಲೆಂಬ ಸಂಸ್ಕಾರ ಕ್ಷಣಕ್ಷಣವು
ಹೊಸ ದೃಷ್ಟಿ, ಹೊಸ ದಿಕ್ಕು ಯುವಜನತೆಗೆ || 2 ||

ಹಾಲೊಳಡಗಿಹ ಘೃತವ ಸಂಸ್ಕರಿಸಿ ಪಡೆವಂತೆ
ಪ್ರತಿಭೆಗಳ ನಾವರಸಿ ಬಲವೀವೆವು
ಪ್ರಾಚೀನ ಸಂಸ್ಕೃತಿಯ ಮೂಲದ್ರವ್ಯಕೆ ನಾವು
ಹೊಸತನದ ಸಭ್ಯತೆಯ ಕಂಪೀವೆವು || 3 ||

ಸಾಧನೆಯ ಯಾನವಿದು ಹೊಸ ತಿರುವ ಕಾಣುತಿದೆ
ಪ್ರೇಮದಲಿ ಶುಭವಚನ ನೀಡಿರೆಮಗೆ
ಪೂರ್ಣದೆಡೆಗಿನ ಪಯಣ ಹೊಸ ಚರಣದಾರಂಭ
ತಮ್ಮ ಹಾರೈಕೆಗಳೇ ರಕ್ಷೆ ನಮಗೆ || 4 ||

(ಜನಸೇವಾ ಪೂರ್ಣ ಮಂಡಲೋತ್ಸವದಲ್ಲಿ ಹಾಡಿದ ಗೀತೆ)

Leave a Reply

Your email address will not be published. Required fields are marked *