ಚಪಲ ಮನವನು ತಣಿಸಿ

ಚಪಲ ಮನವನು ತಣಿಸಿ ಇಂದ್ರಿಯಂಗಳ ಮಣಿಸಿ
ಸಂಯಮದ ಸಾಧನೆಯ ಪ್ರಗತಿ ಮಾರ್ಗ
ಆತ್ಮ ಸುಖವನು ಬಯಸಿ ಸಂತಸದ ಸೆಲೆಯರಸಿ
ಅಂತರಂಗದ ಯಾತ್ರೆಯದುವೆ ಯೋಗ || ಪ ||

ಸತ್ವಯುತ ಆಹಾರ, ಹಿತ-ವಿಹಿತ ವ್ಯವಹಾರ
ಮಿತವಾದ ಉಪಭೋಗ, ವಿಷಯದಾಸಕ್ತಿ
ತಿದ್ದಿರುವ ತನುಮನವು ಶುದ್ಧಗೊಳಿಸಿದ ಬುದ್ಧಿ
ಆತ್ಮಾನುಸಂಧಾನ ಭಗವದನುರಕ್ತಿ || 1 ||

ನನ್ನರಿವ ನಾ ಗಳಿಸಿ ಚಿನ್ಮಯನ ಬೆಸಗೊಳುವ
ಜನ್ಮ ಸಫಲತೆಯೆಂಬ ದಿವ್ಯ ಯೋಗ
ಫಲದ ಬಯಕೆಯು ಇರದ ಕರ್ಮದಲೇ ಸಾರ್ಥಕ್ಯ
ಕರ್ಮದಲಿ ಕುಶಲತೆಯ ಕಲೆಯು ಯೋಗ || 2 ||

ಮತಿಗೆ ಮಣಿದಿಹ ಮನದ ಉನ್ನತಿಯ ಗತಿ ಯೋಗ
ಒಮ್ಮನದಿ ಮುನ್ನಡೆವ ರೀತಿ ಯೋಗ
ಮನುಕುಲದ ಜೊತೆ ಜೀವ ಸಂಕುಲದ ಹಿತದಾಶೆ
ವಿಶ್ವದೇಕಾತ್ಮತೆಯ ಭಾವ ಯೋಗ || 3 ||

Leave a Reply

Your email address will not be published. Required fields are marked *