ಒಟ್ಟುಗೂಡಿ ಜನತೆಯೆಲ್ಲ ಗಟ್ಟಿ ಮನದಿ ಹುಟ್ಟಿದೂರ
ದಿಟ್ಟತನದಿ ಮತ್ತೆ ಮೇಲಕ್ಕೆತ್ತುವ ಬನ್ನಿ
ಕೆಟ್ಟ ಚಟದ ಮೂಲವಳಿಸಿ ಮತ್ತೆ ಹುಟ್ಟದಂತೆ ಅದನು
ಮೆಟ್ಟಿ ತುಳಿದು ನಾವು ಸುಟ್ಟು ಹಾಕೋಣ ಬನ್ನಿ || ಹೊಯ್ ||
ತಿತ್ತಿತ್ತಾರಾ ತಿತ್ತಿತೈ ತಿತ್ತೈ ತಗಧಿನ್ನತ್ತೋಂ
ನಷ್ಟವೆಂದೂ ಬಾರದಂತೆ ಇಷ್ಟದೇವನೊಲಿದು ಕೊಡುವ
ಕಷ್ಟಪಟ್ಟು ದುಡಿದು ನಾವು ಗಳಿಸೋಣ ಬನ್ನಿ
ಅಷ್ಟೋ ಇಷ್ಟೋ ಗಳಿಸಿದುದನು ಒಟ್ಟು ಮಾಡಿ
ಇಟ್ಟುಕೊಂಡು
ಸ್ವಾವಲಂಬಿ ಜೀವನವ ನಡೆಸೋಣ ಬನ್ನಿ || ಹೊಯ್ ||
ತಿತ್ತಿತ್ತಾರಾ ತಿತ್ತಿತೈ ತಿತ್ತೈ ತಗಧಿನ್ನತ್ತೋಂ
ಸುಮ್ಮನಿರದೆ ದುಡಿದು ನಮ್ಮ ಕಾಲ ಮೇಲೆ
ನಿಂತು ನಾವು
ನೆಮ್ಮದಿಯ ಬದುಕ ನಿಂತು ಅರಸೋಣ ಬನ್ನಿ.
ಅಮ್ಮನಂತೆ ನಮ್ಮನ್ನೆಲ್ಲ ಸಲಹುವಾಕೆ ಪ್ರಕೃತಿಮಾತೆ
ಒಮ್ಮನದಿ ಪ್ರಕೃತಿಗೊಮ್ಮೆ ನಮಿಸೋಣ ಬನ್ನಿ || ಹೊಯ್ ||
ತಿತ್ತಿತ್ತಾರಾ ತಿತ್ತಿತೈ ತಿತ್ತೈ ತಗಧಿನ್ನತ್ತೋಂ
ಗ್ರಾಮದಲ್ಲಿ ವಾಸವಿರುವ ಜನರ ನಡುವೆ ಜಗಳ ಬೇಡ
ಸಾಮರಸ್ಯದಿಂದ ನಾವು ಬದುಕೋಣ ಬನ್ನಿ
ಪ್ರೇಮ, ಸ್ನೇಹದಿಂದ ನಾವು ಒಂದೇ ತಾಯ ಮಕ್ಕಳಂತೆ
ಗ್ರಾಮದಲ್ಲೇ ರಾಮ ರಾಜ್ಯ ಕಟ್ಟೋಣ ಬನ್ನಿ || ಹೊಯ್ ||
ತಿತ್ತಿತ್ತಾರಾ ತಿತ್ತಿತೈ ತಿತ್ತೈ ತಗಧಿನ್ನತ್ತೋಂ