ಬಡತನದ ಬೇಗೆಯಲಿ ಬೇಯುತಿಹ ಬಂಧುಗಳ
ಬಾಳಿನಲಿ ಬೆಳದಿಂಗಳೆನಿಸಬೇಕು
ಭಾರತೀಯರ ಭಾವ ಭಿನ್ನತೆಯ ಬದಿಸರಿಸಿ
ಬಂಧು ಭಾವದೊಳವರ ಬೆಸೆಯಬೇಕು || ಪ ||
ಬವಣೆ,ಬೇಗುದಿಯಳಿಸಿ, ಬೇನೆ, ಬೇಸರವಳಿಸಿ
ಬಧಿರತನದುರುಳಿಂದ ಬೇರ್ಪಡಿಸಬೇಕು
ಬಡಿವಾರ ಬದಿಗಿರಿಸಿ ಬಂಧುಗಳ ಬರಸಳೆದು
ಬಿಗಿದಪ್ಪಿ ಭಾವಗಳ ಬೆಸೆಯಬೇಕು || 1 ||
ಬೆಳಕಿನೆಡೆ ಬರಮಾಡಿ ಬಲದೊಲವನೀಯುತ್ತ
ಭರವಸೆಯ ಬೀಜವನು ಬಿತ್ತಬೇಕು
ಬಡವ ಬಲ್ಲಿದರೆಂಬ ಭೇದ ಬದನಿಕೆಯಳಿಸಿ
ಭಾರತದ ಬೇರುಗಳ ಬೆಳೆಸಬೇಕು || 2 ||
ಬವರದಲಿ ಬಲಿದಾನವಾಂತವರ ಬಯಕೆಯೊಲು
ಭವ್ಯ ಭಾರತವನ್ನು ಬಲಿಯಬೇಕು
ಭೂಮಾತೆಯಣುಗರಲಿ ಭೂಮಿ ಭಕ್ತಿಯ ಬೆಳೆಸಿ
ಭವ್ಯ ಭವಿತವ್ಯವನು ಬರೆಸಬೇಕು || 3 ||
I want to sing patriotic songs in patriotic feelings