ಸೇವಾ ಗಂಗೆಯಲಿ ಮಿಂದೆದ್ದು
ಸೇವಾ ತುಂಗಾ ಪಾನವ ಗೈದು
ಸೇವಾವ್ರತವನು ಪಿಡಿಯೋಣ
ಸೇವಾಕಾರ್ಯದಿ ಧುಮುಕೋಣ
ಸೇವಾ ಹಿ ಪರಮೋಧರ್ಮಃ || ಪ ||
ವಿಶ್ವವನಾವರಿಸಿಹ ಕಗ್ಗತ್ತಲ
ಒಮ್ಮನದಲಿ ಬದಿಗೊತ್ತೋಣ
ಧೈರ್ಯವ ತುಂಬುತ ಪ್ರತಿ ಮನದಲ್ಲೂ
ಆತ್ಮವಿಶ್ವಾಸವ ಭರಿಸೋಣ
ಧೈರ್ಯಂ ಸರ್ವತ್ರ ಸಾಧನಂ || 1 ||
ವೈದ್ಯರಂತೆ ಕಾಯಕ ಮಾಡಿ
ಕಾಯಕ ಕೈಲಾಸವೆನ್ನೋಣ
ದಾದಿಯರಂತೆ ಸೇವಾಕಾರ್ಯದಿ
ಅನುದಿನ ಅನುಕ್ಷಣ ತೊಡಗೋಣ
ವೈದ್ಯೋ ನಾರಾಯಣೋ ಹರಿಃ || 2 ||
ತೋರಿಕೆ ಬೇಡ ಸಮರ್ಪಣೆ ಇರಲಿ
ಅಂತ:ಚಕ್ಷುವು ತೆರೆದಿರಲಿ
ಅಂತ:ಕರಣದ ಪ್ರತಿ ಕಣದಲ್ಲೂ
ಸೇವಾಭಾವವು ತುಂಬಿರಲಿ
ಪರೋಪಕಾರಾರ್ಥಮಿದಂ ಶರೀರಂ || 3 ||
ಕಣ್ಣೆವೆ ಕ್ಷಣ ಕ್ಷಣ ಬಡಿಯುವ ತೆರದಿ
ಕರಗಳು ತೊಡಗಲಿ ಕಾರ್ಯದಿ
ನಾಡಿ ಮಿಡಿತದೋಪಾದಿಯಲಿ
ಚರಣವು ಸೇವೆಗೆ ಧಾವಿಸಲಿ
ವಸುಧೈವ ಕುಟುಂಬಕಂ || 4 ||