ಬೆಳಗಲೀ ಬೆಳಗಲೀ ಸನಾತನಾರ್ಯಭಾರತ

ಬೆಳಗಲೀ ಬೆಳಗಲೀ ಸನಾತನಾರ್ಯಭಾರತ
ಕಳೆಯಲೀ ಕಳೆಯಲೀ ಕವಿದ ಕತ್ತಲೆಯ ಮೆರೆತ || ಪ ||

ಬಾಳಿನಲ್ಲಿ ಬೆಳಕು ಕಂಡು ಬಾಳಿದವರ ಭಾರತ
ತೋಳಿನಲ್ಲಿ ಕ್ಷಾತ್ರತೇಜ ತುಂಬಿದವರ ಭಾರತ
ಕೇಳಿದವರ ಜ್ಞಾನತೃಷೆಗೆ ಅಮೃತವಿತ್ತ ಭಾರತ
ಮೌಳಿಯಲ್ಲಿ ಚಂದ್ರಕಲೆಯನಾಂತ ಶಿವನ ಭಾರತ || 1 ||

ಬ್ರಹ್ಮಲೋಕದಿಂದ ಬಂದ ಗಂಗೆ ಹರಿದ ಭಾರತ
ಬ್ರಹ್ಮಭಾವ ತುಂಬಿ ನಿಂತ ಸದ್ಗುರುಗಳ ಭಾರತ
ಧರ್ಮದಿಂದ ರಾಜ್ಯವಾಳ್ದ ರಾಮ ಮೆರೆದ ಭಾರತ
ಧರ್ಮವನ್ನು ಎತ್ತಿ ಹಿಡಿದ ಕೃಷ್ಣ ಬೆಳೆದ ಭಾರತ || 2 ||

ಸಕಲವಿದ್ಯೆಕಲೆಗಳನ್ನು ಬೆಳೆಸಿದವರ ಭಾರತ
ಸಕಲಲೋಕ ಕಲ್ಯಾಣದ ದಾರಿ ತೋರ್ದ ಭಾರತ
ಭಕ್ತಿಯಿಂದ ಮುಕ್ತಿ ಪಡೆದ ಜ್ಞಾನಿಜನರ ಭಾರತ
ಮುಕುತೀಶನ ಅವತಾರದ ಪುಣ್ಯಭೂಮಿ ಭಾರತ || 3 ||

ಸತ್ಯಮಾರ್ಗದಲ್ಲಿ ನಡೆದು ಬಾಳಿದವರ ಭಾರತ
ಸತ್ಯಮೇವ ಜಯತೇ ಎಂದು ಸಾರಿದವರ ಭಾರತ
ಮೃತ್ಯುವನ್ನು ಗೆದ್ದು ಅಮರರಾದವರದು ಭಾರತ
ನಿತ್ಯಸುಖವ ಪಡೆವ ಪಥವ ತೋರಿದವರ ಭಾರತ || 4 ||

Leave a Reply

Your email address will not be published. Required fields are marked *