ತಂಗಾಳಿಯಾಗಿ ನೀ ಬೀಸು ತಂಗಿ
ನೊಂದವರ ಮನೆಯ ಅಂಗಳಕೆ
ಬೆಂದಿಹ ಮನದ ಮಂದಿರಕೆ || ಪ ||
ಬಂಗಾರದೊಡವೆಯ ಹಂಗೇಕೆ ನಿನಗೆ
ಗುಣಗಳೆ ಅಂದದ ಸಿಂಗಾರ
ಸರಳತೆ ಶ್ರದ್ಧೆ ಸತ್ಯ ಸಹೃದಯ
ಎಂದಿಗು ಕರಗದ ಭಂಡಾರ || 1 ||
ನೀ ಒಂಟಿಯೆಂಬ ಭೀತಿಯು ಬೇಡ
ಹಿರಿಯರು ನಿನ ಬೆಂಬಲಕಿಹರು
ಮನೆಮನೆಯಲ್ಲೂ ನಿನ್ನ ಪ್ರೀತಿಸುವ
ನೂರಾರು ಬಂಧುಭಗಿನಿಯರು || 2 ||
ಕಷ್ಟಗಳೆಷ್ಟು ಬಂದರೆ ಬರಲಿ
ಧೈರ್ಯದಿ ಎದುರಿಸಿ ನೀ ನಿಲ್ಲು
ನೋವನ್ನು ನುಂಗಿ ನಗುವನ್ನು ಚೆಲ್ಲು
ಸ್ನೇಹದಿ ಎಲ್ಲರ ಮನಗೆಲ್ಲು || 3 ||
ಬಿದ್ದವರನ್ನು ಮೇಲೆತ್ತಬೇಕು
ಸೇವೆಯೆ ಜೀವನದ ಧರ್ಮ
ಪ್ರತಿಫಲ ಬಯಸದ ಕಾಯಕವೊಂದೇ
ಬಾಳಿನ ಧನ್ಯತೆಯ ಮರ್ಮ || 4 ||
ಜನ್ಮವನಿತ್ತು ಹರಸಿ ಕಳಿಸಿರುವ
ಮನೆತನದ ಹೆಸರು ಉಳಿಸವ್ವ
ಭಾರತಮಾತೆಯ ಸತ್ಪುತ್ರಿಯಾಗಿ
ನಾಡಿನ ಕೀರ್ತಿಯ ಬೆಳೆಸವ್ವ || 5 ||
(ಹಿಂದು ಸೇವಾ ಪ್ರತಿಷ್ಠಾನದ ಸೇವಾವ್ರತಿಗಳಿಗಾಗಿ ರಚಿಸಿದ್ದು)