ಜಯಜಯ ಅಭಿನವ ಋಷಿವರ ಮಾಧವ
ನಿನ್ನಯ ಚರಣಕೆ ನಮೋ ನಮೋ || ಪ ||
ಜನ್ಮಜಾತ ಅನುಪಮ ಪ್ರತಿಭಾನ್ವಿತ
ಧೀಮಂತಿಕೆಯ ಪ್ರತಿರೂಪ
ಪೂರ್ಣ ಜೀವನವ ಮುಡಿಪಾಗಿರಿಸಿದೆ
ಅಳಿಸಲು ಮಾತೆಯ ಸಂತಾಪ || 1 ||
ಭುಜಗಳ ಗಡಿಯನು ದಾಟಿದ ಸೊಂಪಿನ
ಕೇಶರಾಶಿಯ ಲಾಸ್ಯದಲಿ
ದೇಶವಿದಕೆ ಹೊಸ ದಿಶೆಯನು ತೋರಿದೆ
ಹಿಂದುತ್ವದ ನವಭಾಷ್ಯದಲಿ || 2 ||
ಸರಳ ಜೀವನ ಉದಾತ್ತ ಚಿಂತನ
ನಿನ್ನಯ ಬಾಳ ವಿಶೇಷತೆಯು
ನವಭಾರತ ನಿರ್ಮಾಣದ ಕಾರ್ಯದಿ
ಸಾಧಕ ಜನಕದು ಪ್ರೇರಣೆಯು || 3 ||