ಪ್ರಾಣಪ್ರಿಯವೀ ನೆಲದ ಮಣ್ಣ ಕಣಕಣವೆಮಗೆ

ಪ್ರಾಣಪ್ರಿಯವೀ ನೆಲದ ಮಣ್ಣ ಕಣಕಣವೆಮಗೆ
ಧನ್ಯತೆಯ ಮೂಲವದು ಹಿಂದುಜನಕೆ |
ದೈನ್ಯದುಃಖ ಹತಾಶೆ ಸಂಕಟದ ಸಮಯದೊಳು
ಧೈರ್ಯವನು ತುಂಬಿಹುದು ನೊಂದಮನಕೆ || ಪ ||

ಜಗದ ಹೃದಯವ ಗೆದ್ದು ಮೆರೆಯುತಿಹ ಹಿಮರಾಜ
ತಲೆಎತ್ತಿ ನಿಂದಿಹನು ಎತ್ತರದಲಿ |
ವಜ್ರಮುಕುಟ ಹಿಮಾದ್ರಿ ಪ್ರಲಯರುದ್ರಾಲಯವು
ಭದ್ರಸೀಮೆಯು ನಮಗೆ ಉತ್ತರದಲಿ || 1 ||

ಸಗರಕುಲಜನ ಛಲಕೆ ಒಲಿದ ಸುರನದಿ ಗಂಗೆ
ನಾಕದಮೃತವನ್ನು ಉಣಿಸುತಿಹಳು |
ಬರದಿ ಬೆಂದಿಹ ನೆಲಕೆ ಜಲಧಾರೆ ಹರಿಸುತಲಿ
ಭುವಿಯ ಬಾಯಾರಿಕೆಯ ತಣಿಸುತಿಹಳು || 2 ||

ಗ್ರಾಮ ಗ್ರಾಮವು ಸಿರಿಯ ಸಂಸ್ಕೃತಿಯ ಭಂಡಾರ
ಕಾವ್ಯ ಸಾಹಿತ್ಯ ಚೆಲು ಕಲೆಯ ನೆಲೆಯು
ರಾಮಕೃಷ್ಣರ ಕಥೆಯು ವೇದಗಳ ಸಂಹಿತೆಯು
ಬತ್ತದಿದು ಮನುಜತೆಯ ಅಮರಸೆಲೆಯು || 3 ||

ಬುದ್ಧಶಂಕರ ಮಧ್ವ ಬಸವ ಸಂತರ ವಾಣಿ
ಮನುಕುಲಕೆ ಚಿರಕಾಲ ಮಾರ್ಗದರ್ಶಿ
ಶಿವಪ್ರತಾಪರ ಶೌರ್ಯ ಕುವರಸಿಂಹರ ಧೈರ್ಯ
ಯುವಜನಾಂಗಕೆ ಸ್ಫೂರ್ತಿ ಹೃದಯಸ್ಪರ್ಶಿ || 4 ||

Leave a Reply

Your email address will not be published. Required fields are marked *