ಭಾರತಮಾತೆಯ ಮಕ್ಕಳು ನಾವು
ಎಂಬುವುದೆಮಗೆ ಅಭಿಮಾನ
ಆಸೇತು ಹಿಮಾಚಲ ಪರ್ಯಂತ
ಮೊಳಗಲಿ ತಾಯಿಯ ಜಯಗಾನ || ಪ ||
ಒಂದೇ ನಾಡಲಿ ಜನಿಸಿದ ಬಳಿಕ
ಮೇಲುಕೀಳು ಅಂತರವೇಕೆ ?
ಏಳುಬೀಳುಗಳ ಬಾಳಹಾದಿಯಲಿ
ಗುರಿಯನು ಮರೆಯದಿರಿ ಜೋಕೆ || 1 ||
ರಾಮಕೃಷ್ಣರ ಪಾವನಭೂಮಿ
ದಿವ್ಯಶಕ್ತಿಯ ಭಂಡಾರ
ಶಂಕರ ಬಸವರ ಬುದ್ಧ ವಿವೇಕರ
ತತ್ವಾದರ್ಶದ ಆಧಾರ || 2 ||
ಜನನ ಮರಣಗಳ ನಡುವಿನ ಜೀವನ
ಸಾಗಲಿ ಸನ್ಮಾರ್ಗದಿ ನೇರ
ಸ್ವಾರ್ಥವ ದಹಿಸಿ ಕೀರ್ತಿಯ ಗಳಿಸಿ
ಗೈಯುವ ನಾಡಿನ ಉದ್ಧಾರ || 3 ||