ಕಲೆಯು ರಂಜನೆಗಲ್ಲ ಭಗವದಾರಾಧನೆಗೆ
ಶಿವನಾಗಿ ಶಿವಪೂಜೆ ಬಾಳಬಯಕೆ
ಉನ್ಮತ್ತಚಿತ್ತಕ್ಕೆ ಪಥವೇನು ಗತಿಯೇನು
ಸ್ಥಿರಚಿತ್ತ ಉತ್ಕರ್ಷ ಕಲೆಯ ಹರಕೆ || ಪ ||
ಭಾವಪ್ರವಾಹಕ್ಕೆ ತಾಳಲಯಗಳ ತೀರ
ಶಾಂತ ಸುಖಸಾಗರದ ದಿಶೆಗೆ ಯಾನ
ರುದ್ರತಾಂಡವದೊಡನೆ ಉಮೆಯಲಾಸ್ಯದ ಮಿಲನ
(ಧೀಂತಕಿಟ ಧಿರಗಿಟತಕಿಟ ಧೀಂತಕಿಟ ಧೀಂತಾ)
ಭದ್ರವನೆ ಉಲಿಯಿತು ರುದ್ರವೀಣಾ || 1 ||
ಸೃಷ್ಟಿಮೂಲವೆ ನಾದ ಪ್ರಣವಮಂತ್ರ ನಿನಾದ
ಪ್ರಸ್ತರಣ ವಿಸ್ತರಣ ಶಾಸ್ತ್ರವೇದ
ಒಂದು ಹಲವಾಗುವುದು ಹಲವರಲು ತಾನಿಹುದು
ಪಠಣ ಗಾಯನದಿಂದ ತತ್ವ ಬೋಧ || 2 ||
ಮರುಳು ಮನಸಿನ ಶಮನ ಸುಖಪಥದ ಸೋಪಾನ
ಬದುಕು ಭಗವತಿಯುಲಿವ ಭಾವಗಾನ
ಹೃದಯದನುಸಂಧಾನ ಒಡನೆ ಅಂತರ್ಯಾನ
ಕಲೆಯು ಬಂಧನವಲ್ಲ ಮುಕ್ತಿಯಾನ || 3 ||