ಭರತಭೂಮಿಯ ಭಾಗ್ಯ ಉದಿಸಿದೆ ಏಳು ಮೇಲಕೆ ತರುಣನೆ
ಭರದಿ ಸೇರಲಿ ಕೋಟಿ ಕರಗಳು ತರಲು ಶುಭಪರಿವರ್ತನೆ || ಪ ||
ಗರ್ಜಿಸುವುದನು ಮರೆತು ಸಿಂಹವದೇಕೆ ನರಿಗಳ ನೆಚ್ಚಿದೆ?
ಸಜ್ಜನರ ನಿಷ್ಕ್ರಿಯತೆ ಕಾರಣ ದುರ್ಜನರ ಬಲ ಹೆಚ್ಚಿದೆ!
ಆವ ದೈವವು ಕಾವುದೆನ್ನುತ ಬಾಗಿ ಕಂಗಳ ಮುಚ್ಚಿದೆ?
ದೇವದುರ್ಲಭ ಸಂಘಟನೆಯಿದೆ ಸಾಗು ಬೆದರದೆ ಬೆಚ್ಚದೆ! || 1 ||
ಸೌಮ್ಯ ಸಂಸ್ಕೃತಿ ಸುಧೆಗೆ ಪೂತನಿ ವಿಷವನಿಕ್ಕುವ ಸಂಚಿದೆ
ಸಾಮ್ಯವಾದದ ಮಾಯೆ ಜಿಂಕೆಯು ನಾಡನೊಡೆಯಲು ಹೊಂಚಿದೆ
ಶಸ್ತ್ರಶಾಸ್ತ್ರದೊಳಾರು ನಿನಗೆಣೆ ನುಗ್ಗು ಸ್ಫೂರ್ತಿಯ ಚಿಮ್ಮುತ
ಶತ್ರುಶೇಷವ ಭಸ್ಮಗೈವುದು ಸಮರನೀತಿಗೆ ಸಮ್ಮತ || 2 ||
ರಾಜಕಾರಣ ಮಾಡಬಲ್ಲುದೆ ಸರ್ವಕಷ್ಟ ನಿವಾರಣ?
ಸಾಜಧರ್ಮದಿ ದುಡಿಯಲೆಲ್ಲರು ಸಕಲ ಸಂಪದ ಸಾಧನ
ದೇಶಹಿತಚಿಂತನೆಯು ಪಡೆಯಲಿ ಹೃದಯ ಹೃದಯದಿ ಮುನ್ನೆಲೆ
ದೇಶಭಕ್ತಿಗು ದೈವಭಕ್ತಿಗು ಸಲಲಿ ಗೌರವ ಸಮನೆಲೆ || 3 ||