ಮನದಿ ಮಂದಾಸನವನಿತ್ತಿಹೆ
ಮಾತೆ ಮೋದದಿ ಮಂಡಿಸು
ಮೂಢನಾಗಿಹೆ ಮೌಲ್ಯ ಮರೆತಿಹೆ
ಮುನಿಸುದೋರದೆ ಮನ್ನಿಸು || ಪ ||
ಮೂಡಣಾಗಸದಲ್ಲಿ ಮಿತ್ರನು
ಮಗುವಿನಂದದೊಳುದಿಸಲು
ಮಮತೆಯಾ ಮಂದಾರವರಳಿತು
ಮಧುರ ಮಧುವನ್ನೀಯಲು || 1 ||
ಮುನಿ ಮನೀಷಿಗಳೆಲ್ಲ ಮಾಡಿದ
ಮನನ ಮಂಥನದಿಂದಲಿ
ಮೇದಿನಿಗೆ ಮುದ ಮೋಕ್ಷವಾತ್ಮಕೆ
ಮಂತ್ರವುದಿಸಿತು ಮನದಲಿ || 2 ||
ಮನುಜನುಳಿವಿನ ಮಾರ್ಗವರಿಯಿತು
ಮಂತ್ರವಾಯಿತು ಮುನ್ನುಡಿ
ಮೋಹ ಮರೆಯುತ ಮದವನಳಿಸುತ
ಮನುಜನಿರಿಸಿದ ಮುಂದಡಿ || 3 ||
ಮಾನವನ ಮಹದೇವನಾಗಿಪ
ಮಂತ್ರ ಮಾರ್ದನಿಗೊಳುತಿದೆ
ಮಗುವಿನಂದದಿ ಮಣಿದೆ ಮುದದಲಿ
ಮಣ್ಣು ಮಸ್ತಕವೇರಿದೆ || 4 ||
ಅರ್ಥ: ಮಾತೆಯೇ ನಿನಗೆ ನನ್ನ ಮನಸ್ಸಿನಲ್ಲಿ ಬಹಳ ಗೌರವದ ಸ್ಥಾನವನ್ನು ನೀಡಿದ್ದೇನೆ. ನಿನ್ನ ಮಹತ್ವವನ್ನೂ ನನ್ನ ಜೀವನದ ಮೌಲ್ಗಳನ್ನೂ ಮರೆತು ಮೂರ್ಖತನದಿಂದ ವರ್ತಿಸುತ್ತಿರುವ ನನ್ನ ಮೇಲೆ ಕೋಪಿಸದೆ ಕ್ಷಮಿಸು. ಪೂರ್ವ ದಿಕ್ಕಿನಲ್ಲಿ ಬಾಲ ಸೂರ್ಯನ ಉದಯವಾಗುತ್ತಿದ್ದಂತೆ ಜಗತ್ತಿಗೇ ಸವಿಯುಣಿಸಲು ಮಮತೆಯ ಮಂದಾರ ಪುಷ್ಪಗಳರಳಿವೆ. (ಭಾರತೀಯತೆ ನಿಧಾನವಾಗಿ ಜಾಗೃತ ವಾಗುತ್ತಿದ್ದಂತೆ ಜಗತ್ತಿಗೇ ಕಲ್ಯಾಣವಾಗುತ್ತಿದೆ)
(ನಮ್ಮ ಸ್ವಭಾವವೇ ಅದು)
ನಮ್ಮದೇಶದ ಸರ್ವಸಂಗ ಪರಿತ್ಯಗಿಗಳಾದ ಮುನಿಗಳೂ ವಿದ್ವಾಂಸರೂ ಮಾಡಿದ ಚಿಂತನೆ ಸಂವಾದಗಳಿಂದ ‘ ಆತ್ಮನೋ ಮೋಕ್ಷಾರ್ಥಂ, ಜಗದ್ಧಿತಾಯ ಚ” ಮುಂತಾದ ಮಂತ್ರವುದಿಸಿತು.
ಮಾನವನ ಉಳಿವಿಗೆ ( ಆ ಮೂಲಕ ಜಗತ್ತಿನ ಉಳಿವಿಗೆ) ಬೇಕಾದ ಈ ಮಂತ್ರವು ಮುನ್ನುಡಿಯಾಯಿತು.ಇದರ ಆಧಾರದಲ್ಲಿಯೇ ಜೀವನ ರೂಪುಗೊಳ್ಳುವಾಗ ಸಹಜವಾಗಿ ಮದ, ಮತ್ಸರ ಮೋಹವೇ ಮೊದಲಾದವುಗಳು ನಾಶವಾದವು
ಈ ಮಂತ್ರ ಮಾನವನನ್ನು ಮಹದೇವನಾಗಿಸುವ ಮಂತ್ರ. ಇದು ಇಂದು ಪ್ರತಿಧ್ವನಿಗೊಳ್ಳುತ್ತಿದೆ. (ಜಗತ್ತಿಗೇ ಒಪ್ಪಿಗೆಯಾಗುತ್ತಿದೆ)
ಹೇ ಮಾತೆಯೇ, ಮಗುವಿನಂತೆ ನಿನ್ನ ಪಾದಗಳಿಗೆ ನಮಿಸಿದ್ದೇನೆ. ಈಮಣ್ಣ ಧೂಳಿ ಪ್ರಸಾದದಂತೆ ನನ್ನ ಶಿರವೇರಿದೆ. ( ಈ ಮಣ್ಣು ಬರೀ ಮಣ್ಣಲ್ಲ, ಪ್ರಸಾದ)