ಭಾರತದ ಅಸ್ಮಿತೆಗೆ ಎರಗಿಹ ಸವಾಲುಗಳ
ಸ್ವೀಕರಿಸ ಬನ್ನಿರೋ ತರುಣ ಜನರೆ
ಹೆಮ್ಮೆಯಿಂದೆದೆಯೆತ್ತಿ ನಮ್ಮದೀ ನೆಲವೆಂದು
ಜಗಕೆ ಸಾರುವ ಬನ್ನಿ ಹಿಂದು ಜನರೆ || ಪ ||
ಮೇದಿನಿಯು ಮುಳುಗಿರಲು ಗಾಢಾಂದಕಾರದಲಿ
ಜ್ಞಾನಜ್ಯೋತಿಯ ಬೆಳೆಗಿದಂಥ ನೆಲವು
ಪರಕೀಯ ತತ್ವಗಳ ಅಂಧಾನುಕರಣೆಯಲಿ
ಮೈಮರೆತು ಮಲಗಿದರೆ ಏನು ಫಲವು? || 1 ||
ಜಾತಿಮತಭೇದಗಳ ಬೇಲಿಗಳ ಕಿತ್ತೆಸೆದು
ಏಕಪುರುಷನ ತೆರದಿ ಎದ್ದು ನಿಂದು
ಭಿನ್ನತೆಯ ಬದಿಗಿರಿಸಿ ತನ್ನತವನು ಮೆರೆಸಿ
ಹೊನ್ನಿನಂತಹ ನಾಡ ಕಟ್ಟಿರಿಂದು || 2 ||
ಗುಪ್ತಗಾಮಿನಿಯಂತೆ ನಾಡ ನಾಡಿಗಳಲ್ಲಿ
ಸುಪ್ತವಾಗಿರ್ಪ ಛಲ ಸ್ವಾಭಿಮಾನ
ಪ್ರಕಟಗೊಳ್ಳಲಿ ಇಂದು ಪ್ರವಹಿಸಲಿ ಭೋರ್ಗರೆದು
ಮರಳಿ ಗಳಿಸಲು ಪ್ರಥಮ ಸ್ಥಾನಮಾನ || 3 ||
ಗಾದಿ ಏರಿದ ಜನರ ಹಾದಿ ತಪ್ಪಿಪ ಹುಸಿಯ
ವಾದಗಳ ಸೋಗನ್ನು ಛಿದ್ರಗೊಳಿಸಿ
ಜಟಿಲತೆಯ ಜಾಲಗಳ ಕುಟಿಲತೆಯ ವ್ಯೂಹಗಳ
ಛೇದಿಸುತ ರಾಷ್ಟ್ರವನು ಭದ್ರಗೊಳಿಸಿ || 4 ||
ನಿಲ್ಲಿದಿರಿ ಒಂದು ಕ್ಷಣ ಸಲ್ಲದಿದು ಹೇಡಿತನ
ಗೆಲ್ಲುವುದೆ ಗುರಿಯೆಮದು ಕಟ್ಟಕಡೆಗೆ
ಸಜ್ಜುಗೊಳಿಸಿರಿ ಪಡೆಯ ಕ್ಷಿಪ್ರಗೊಳಿಸಿರಿ ನಡೆಯ
ವಿಶ್ವಮಾಂಗಲ್ಯದಾ ಧ್ಯೇಯದೆಡೆಗೆ || 5 ||