ಜಗವನ್ನೆ ಬೆಳಗಿಸಲು ನಾಡು ಸಜ್ಜಾಗಿಹುದು

ಜಗವನ್ನೆ ಬೆಳಗಿಸಲು ನಾಡು ಸಜ್ಜಾಗಿಹುದು
ಅಸ್ತಮಿಸಿದೆ ನೀನು ಜನಮನದ ಸೂರ್ಯ|
ಸ್ವರ್ಣಯುಗ ಸನ್ನಿಹಿತವಾಗಿರುವ ಸಮಯದಲಿ
ಭಾರವಾಗಿಹುದಿಂದು ಭಾರತದ ಹೃದಯ || 1 ||
ಅಸ್ತಮಿಸಿದೆ ನೀನು…….

ಅನುದಿನವು ಅನುಕ್ಷಣವು ಆತಂಕವೆದುರಿಸಿರೆ
ಸಮ್ಮಿಶ್ರ ಸರ್ಕಾರದಾ ಪ್ರಯೋಗ|
ನಿನ್ನ ಕೌಶಲದಿಂದ ಸಮರಸದ ಬಲದಿಂದ
ಸಾಧಿಸಿದೆ ಅಭ್ಯುದಯದತುಲ ವೇಗ || 2 ||
ಅಸ್ತಮಿಸಿದೆ ನೀನು……

ರಾಷ್ಟ್ರವಾಣಿಯ ವಿಶ್ವಸಂಸ್ಥೆಯಲಿ ಮೊಳಗಿಸಿದೆ
ಮಾನ್ಯತೆಯ ತಂದಿತ್ತೆ ಭಾರತಕೆ ನೀನು|
ನಮ್ಮೇಳ್ಗೆ ಸಹಿಸದಿಹ ಅಗ್ರರಾಷ್ಟ್ರಗಳಿಂಗೆ
ಅಣ್ವಸ್ತ್ರದೆಚ್ಚರಿಕೆ ನೀಡಿರುವೆ ನೀನು || 3 ||
ಅಸ್ತಮಿಸಿದೆ ನೀನು……..

ಶಸ್ತ್ರಶಾಸ್ತ್ರಗಳನ್ನು ಸಂತಲನಗೈಯುತಲಿ
ನಾಡ ಮುನ್ನಡೆಸಿರುವ ಜನನಾಯಕ|
ಅರಿಯ ಖಡ್ಗಕೆ ಖಡ್ಗದುತ್ತರವ ನೀಡಿರುವ
ಕಾರ್ಗಿಲ್ಲ ದಿಗ್ವಿಜಯದಧಿನಾಯಕ || 4 ||
ಅಸ್ತಮಿಸಿದೆ ನೀನು……..

ನೀನೇರಿದೆತ್ತರಕೆ ಏರಿದವರಾರು?
ನಿನ್ನ ನಲ್ನುಡಿಗಳನ್ನು ಮೀರಿದವರಾರು?
ಶತ್ರುಗಳ ಕೈಕುಲುಕಿ ಅಂತರಂಗವ ಕಲಕಿ
ವಿಶ್ವಶಾಂತಿಯ ಪಥವ ತೋರಿದವರಾರು? || 5 ||
ಅಸ್ತಮಿಸಿದೆ ನೀನು…….

(ಮಾನನೀಯ ಅಟಲ್ ಬಿಹಾರಿ ವಾಜಪೇಯಿಯವರು ನಿಧನರಾದಾಗ ಬರೆದ ಕವಿತೆಯಿದು)

One thought on “ಜಗವನ್ನೆ ಬೆಳಗಿಸಲು ನಾಡು ಸಜ್ಜಾಗಿಹುದು

Leave a Reply

Your email address will not be published. Required fields are marked *