ಅವತರಿಸು ಶ್ರೀರಾಮ ಈ ಭರತ ಭುವಿಗೆ|
ಉದ್ಧರಿಸಲೀ ಜಗವ ಬಾರಯ್ಯ ಧರೆಗೆ|
ಆಗಮಿಸು ಓಗೊಡುತ ಭಾರತದ ಕರೆಗೆ|
ಸ್ಪಂದಿಸುತ ಶತಕೋಟಿ ಭಕ್ತರಾ ಮೊರೆಗೆ || ಪ ||
ಶ್ರೀರಾಮ ಜಯರಾಮ ಕೋದಂಡರಾಮ|
ಶ್ರೀರಾಮ ಜಯರಾಮ ಪಟ್ಟಾಭಿರಾಮ||
ತವ ಜನ್ಮಭೂಮಿಯನು ಮುಕ್ತಗೊಳಿಸುವ ಕಾರ್ಯ|
ಶತಕಗಳ ಹೋರಾಟ ಆಯಿತನಿವಾರ್ಯ|
ಮರೆಯಲಾಪುದೆ ಕಾರಸೇವಕರ ಕೈಂಕರ್ಯ
ಸಫಲವಾಯಿತು ಸಂತ ಭೀಷ್ಮ ಸಾರಥ್ಯ || 1 ||
ಬೆವರು ನೆತ್ತರ ಹರಿಸಿ ಪ್ರಾಣವನೆ ಪಣವಿಟ್ಟು|
ಅಸುನೀಗಿದಗ್ರಜರೇ ಎಮಗೆ ಮೇಲ್ಪಂಕ್ತಿ|
ದುಷ್ಟಕುಲ ಮರ್ದನಕೆ ರಾಷ್ಟ್ರಸಂರಕ್ಷಣೆಗೆ|
ಕೋದಂಡಧರ ನೀನು ನೀಡೆಮಗೆ ಶಕ್ತಿ || 2 ||
ಬಂದಿಹುದು ಮಂದಿರವ ನಿರ್ಮಿಸುವ ಶುಭಘಳಿಗೆ|
ತಂದಿಹುದು ಸಂಭ್ರಮವ ರೋಮಾಂಚವೀ ಇಳೆಗೆ|
ಸಿಂಗಾರಗೊಂಡಿಹುದು ಶ್ರೀ ಅವಧ ಪುರಿಯು|
ಕೈಬೀಸಿ ಕರೆಯುತಿದೆ ದೇವನದಿ ಸರಯೂ || 3 ||
ತಲೆಬಾಗಿ ನಿಂದಿಹವು ಉತ್ತುಂಗ ಶೃಂಗಗಳು|
ಕಾಲ್ತೊಳೆಯೆ ಕಾದಿಹವು ಸಾಗರ ತರಂಗಗಳು|
ಏಕಾತ್ಮ ಭಾರತದ ಶಕ್ತಿಗೆದುರಾರು?
ಸ್ಮರಿಸಲಿದೆ ಈ ಕ್ಷಣವ ನೂರು ತಲೆಮಾರು || 4 ||