ಓ ದಾರಿಗನೇ ಪ್ರಿಯ ನೇಹಿಗನೇ
ಗೈಯುವ ಬಾ ನವಯುಗ ನಿರ್ಮಾಣ
ಸಮಾಜದೇವತೆಗರ್ಪಿತವಾಗಲಿ
ನಮ್ಮೆಲ್ಲ ತನು ಮನ ಧನ ಪ್ರಾಣ || ಪ ||
ಹಿಡಿಕೂಳಿನ ಬರಿಗೋಳಿನ ಬಾಳಿಗೆ
ಮಾರುವೆಯಾ ತನುಮನವನು ಗೆಳೆಯಾ
ಪಶುಬಲದಿದಿರಿಗೆ ಅಡಿಯಾಳಾಗುತ
ಮರೆಯುವೆಯಾ ಮಾನವ್ಯದ ಗುರಿಯಾ? || 1 ||
ಭ್ರಮೆಯನು ಕೊಡವಿಕೊ ಕಣ್ತೆರೆದರಿತುಕೊ
ಮಾನವ ಜೀವನದನಂತ ಮಹಿಮೆ
ಬಿಸಿಯಾರುವ ಮೊದಲೇ ಜಗವರಿಯಲಿ
ನಿನ್ನಯ ಪವಿತ್ರ ರಕ್ತದ ಹಿರಿಮೆ || 2 ||
ಇಚ್ಚಾಶಕ್ತಿಯು ಭೂಮನವನಪ್ಪಲಿ
ಮೋಹದ ಭೋಗದ ಕನಸನು ಮುರಿದು
ಹೃದಯ ಹಕ್ಕಿಯು ಆಗಸವಾಳಲಿ
ಸೋಗಿನ ಸೊಬಗಿನ ಪೊರೆಯನು ಹರಿದು || 3 ||
ಬಾಳೆಲ್ಲವು ಮುಡುಪಾಗಿಡು ವೀರನೆ
ದಿನದಿನವೂ ಹೊಸ ಹೊಸ ಸಾಹಸಕೆ
ಧ್ಯೇಯದ ಆ ಆನಂದದಿ ವಿಹರಿಸು
ಹರಡಲಿ ಚಿರಕೀರ್ತಿಯು ಯುಗ ಯುಗಕೆ || 4 ||