ಮಣಿದುದೀ ಜಗ ಹಿಂದು ತೇಜಕೆ ಜ್ಞಾನ ತಪಸಿಗೆ ತ್ಯಾಗಕೆ
ಮರುಳುಗೊಳುವೆಯ ಮಾನಧನ ನೀನಿಂದು ಕ್ಷಣಿಕದ ಭೋಗಕೆ || ಪ ||
ಪಾರಿವಾಳದ ಪ್ರಾಣ ಉಳಿಸಲು ತೊಡೆಯ ಮಾಂಸವ ಕೂಯ್ದವ
ಹುಲಿಯ ಹಾಲನು ಸವಿದು ಸಿಂಹದ ಹಲ್ಲನೆಣಿಸಲು ತುಯ್ದವ
ಅರಿಯ ತರಿಯುತ ದೇಹಿ ಎನುವರಿಗೆ ಭಯ ನೀಡಿದೆ ಕರುಣದಿ
ನಿಗ್ರಹಾನುಗ್ರಹ ಸಮರ್ಥನು ಶಸ್ತ್ರಶಾಸ್ತ್ರದ ಸ್ಪುರಣದಿ || 1 ||
ಮಣ್ಣ ರೂಪಿಗೆ ಕಣ್ಣು ಮೂಡಿಸಿ ಧ್ಯೇಯದೆರಕವನೆರೆವ ಬಾ
ಸಂಘಟಿತ ಸಮರಸ ಸಮಾಜದ ದವಲ ಚರಿತೆಯ ಬರೆವ ಬಾ
ಗುಬ್ಬಿ ಮರಿಗಳು ಗರುಡ ಬಲದಲಿ ಭೂಮಿ ಗಗನವನಾಳಲಿ
ದಿಗ್ದಿಗಂತದಿ ಭರತಮಾತೆಯ ಕೀರ್ತಿಗಾನವು ಮೊಳಗಲಿ || 2 ||
ಹಾರ ಹೊಗಳಿಕೆ ಪದ ಪ್ರಸಿದ್ಧಿಯ ಮೋಹಜಾಲಕೆ ಸಿಲುಕದೆ
ನಿಂದೆ ಪರಿಭವ ಭಯ ನಿರಾಸೆಗೆ ಅಳುಕದೆ ಮನ ಕಲುಕದೆ
ಇರಲಿ ಹೃದಯದೊಳೊಂದೆ ಹಂಬಲ ತಾಯಿನಾಡಿನ ವೈಭವ
ಸುರಿದು ಜೀವನ ದುಡಿದು ಕ್ಷಣಕ್ಷಣ ಪಡೆಯೊ ಧನ್ಯತೆಯಾನುಭವ || 3 ||