ಉತ್ಸಾಹ ಚಿಮ್ಮುವ ಹರೆಯದಲಿ

ಉತ್ಸಾಹ ಚಿಮ್ಮುವ ಹರೆಯದಲಿ
ಗುರಿಗಾಗಿ ಕಾತುರ ಛಲವಿರಲಿ
ಥಳುಕಿನ ಚಂಚಲ ಹರಿವಿನಲಿ
ದೃಢ ನಿರ್ಧಾರದ ನೆಲೆಯಿರಲಿ     ||ಪ||

ಯೌವನ ಹೊಮ್ಮುವ ತನುವಿರಲಿ
ಅಂಜಿಕೆ ಅಳುಕು ಕಾಡದಿರಲಿ
ಪ್ರವಾಹದೆದುರು ಸೆಣಸಿನಲಿ
ಅದಮ್ಯ ವಿಶ್ವಾಸ ಹುದುಗಿರಲಿ     || 1 ||

ತಾರುಣ್ಯ ತೋರುವ ಕನಸಿನಲಿ
ಹೊಸ ವಸಂತದ ಚಿಗುರಿರಲಿ
ಹೊನ್ನ ಕಿರಣದ ಚೆಲುವಿನಲಿ
ಭೂಮಿಯ ಬಳುವಳಿ ನೆನಪಿರಲಿ  || 2 ||

ತುಡಿಯುವ ತೋಳಿನ ಬೀಸಿನಲಿ
ಸಿರಿಯನು ಸೃಜಿಸುವ ಕಸುವಿರಲಿ
ಮಿಡಿಯುವ ಹೃದಯದ ಹಾಸಿನಲಿ
ಸೇವೆಯ ಆದರ್ಶ ಸೆಲೆಯಿರಲಿ      || 3 ||

Leave a Reply

Your email address will not be published. Required fields are marked *